Kalaburagi | ಯುವ ಸಂಗಮದ 7ನೇ ಹಂತದ ಕರ್ನಾಟಕ ಪ್ರವಾಸ ಸಮಾಪ್ತಿ

ಕಲಬುರಗಿ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಉಪಕ್ರಮದಡಿ ಆಯೋಜಿಸಲಾಗಿದ್ದ ಯುವ ಸಂಗಮದ 7ನೇ ಹಂತದ ಕರ್ನಾಟಕ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆ. 28ರಿಂದ ಅ. 3ರವರೆಗೆ ನಡೆದ ಪ್ರವಾಸದಲ್ಲಿ ಮಧ್ಯಪ್ರದೇಶದ 51 ಸದಸ್ಯರ ಯುವ ನಿಯೋಗ ಭಾಗವಹಿಸಿತ್ತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಪ್ರವಾಸದ ಆತಿಥ್ಯ ವಹಿಸಿತ್ತು.
ಯುವ ನಿಯೋಗವು ಬೀದರ್, ಬೆಂಗಳೂರು ಹಾಗೂ ಕಲಬುರಗಿಗೆ ಭೇಟಿ ನೀಡಿ ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೃಷಿ ಕ್ಷೇತ್ರಗಳ ಪರಿಚಯ ಪಡೆದುಕೊಂಡಿತು.
ಬೀದರ್‌ನಲ್ಲಿ ಕೋಟೆ, ಗುರುದ್ವಾರ ನಾನಕ್ ಝೀರಾ ಸಾಹೇಬ್ ಹಾಗೂ ಬೀದ್ರಿ ಕಲಾ ಕೇಂದ್ರಗಳಿಗೆ ಭೇಟಿ ನೀಡಿದ ನಿಯೋಗ, ಪದ್ಮಶ್ರೀ ಪುರಸ್ಕೃತ ಬೀದ್ರಿ ಕಲಾವಿದ ಶಾ ರಶೀದ್ ಅಹಮದ್ ಖಾದ್ರಿ ಅವರೊಂದಿಗೆ ಸಂವಾದ ನಡೆಸಿತು.
ಬೆಂಗಳೂರಿನಲ್ಲಿ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂಬಿ), ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಹಾಗೂ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ)ಗೆ ಭೇಟಿ ನೀಡಿ ಶಿಕ್ಷಣ, ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡಿತು. ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಸಂವಾದ ನಡೆಸಿತು.
ಕಲಬುರಗಿಯಲ್ಲಿ ತೊಗರಿ ಬೇಳೆ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ನಿಯೋಗ, ತೊಗರಿ ಉತ್ಪಾದನೆ, ಸಂಸ್ಕರಣೆ ಹಾಗೂ ಕೃಷಿ ಆಧಾರಿತ ಆರ್ಥಿಕತೆಯ ಕುರಿತು ಮಾಹಿತಿ ಪಡೆದುಕೊಂಡಿತು.
ಸಿಯುಕೆನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶದ ಯುವಕರು ವಿವಿಧ ಸಾಂಪ್ರದಾಯಿಕ ಮತ್ತು ಬುಡಕಟ್ಟು ನೃತ್ಯಗಳನ್ನು ಪ್ರದರ್ಶಿಸಿದರು.
ಯುವ ಸಂಗಮದ 7ನೇ ಹಂತದ ನೋಡಲ್ ಅಧಿಕಾರಿ ಡಾ. ಎಂ. ಶಿವ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಜಗದೀಶ್ ಬಿರಾದಾರ್ ಅವರ ನೇತೃತ್ವದಲ್ಲಿ ನಡೆದ ಪ್ರವಾಸವು ಎರಡೂ ರಾಜ್ಯಗಳ ಯುವಜನರ ನಡುವೆ ಸಾಂಸ್ಕೃತಿಕ ವಿನಿಮಯ, ಪರಸ್ಪರ ತಿಳುವಳಿಕೆ ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.






