Kalaburagi | ಕರ್ನಾಟಕದ ಇತಿಹಾಸವೆಂದರೆ ಏಕೀಕರಣ, ಹೋರಾಟ ಮತ್ತು ತ್ಯಾಗದ ಇತಿಹಾಸ: ಪ್ರೊ.ವೆಂಕಟರಾವ್ ಪಲಾಟೆ
‘ಕರ್ನಾಟಕ ಏಕೀಕರಣ: ನಡೆದು ಬಂದ ದಾರಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ : ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ಮರಿಸುವುದರ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಕರ್ನಾಟಕ ಏಕೀಕರಣ: ನಡೆದು ಬಂದ ದಾರಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ಮಾತನಾಡುವ ಜನರು ಮೈಸೂರು ಸಂಸ್ಥಾನ, ಮುಂಬೈ, ಮದ್ರಾಸ್ ಮತ್ತು ಹೈದರಾಬಾದ್ ಪ್ರಾಂತ್ಯಗಳ ಆಡಳಿತದಡಿ ವಿಭಜನೆಗೊಂಡಿದ್ದರು. ಅನೇಕ ಹೋರಾಟಗಾರರ ತ್ಯಾಗ, ಪರಿಶ್ರಮ ಮತ್ತು ನಿರಂತರ ಹೋರಾಟದ ಫಲವಾಗಿ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. ರಾಜ್ಯಗಳ ಪುನರ್‌ರಚನಾ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಫಜಲ್ ಅಲಿ ಅವರ ವರದಿಯ ಆಧಾರದ ಮೇಲೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಭಾಷಾವಾರು ಆಧಾರದಲ್ಲಿ ಪುನರ್‌ರಚನೆಗೊಂಡವು ಎಂದು ಸ್ಮರಿಸಿದರು.
ಭಾರತದ ಸಾಂಸ್ಕೃತಿಕ ಏಕತೆಯೇ ದೇಶದ ಬಹುದೊಡ್ಡ ಶಕ್ತಿಯಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲ ರಾಜ್ಯಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ನಿಜವಾದ ಪ್ರಗತಿ ಸಾಧ್ಯ. ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಅನೇಕ ವಿದೇಶಿ ರಾಷ್ಟ್ರಗಳು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.
ಏಕೀಕರಣದ ಹಿಂದೆ ಹೋರಾಟ, ತ್ಯಾಗ :
‘ಕರ್ನಾಟಕ ಏಕೀಕರಣ: ನಡೆದು ಬಂದ ದಾರಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟರಾವ್ ಎಂ. ಪಲಾಟೆ, ಕರ್ನಾಟಕದ ಇತಿಹಾಸವೆಂದರೆ ಏಕೀಕರಣ, ಹೋರಾಟ ಮತ್ತು ನಿರಂತರ ಪರಿಶ್ರಮದ ಇತಿಹಾಸವಾಗಿದೆ. ಅನೇಕ ಹೋರಾಟಗಾರರು, ಸಂಘಟನೆಗಳು, ಕನ್ನಡದ ಕಟ್ಟಾಳುಗಳು, ಸಾಹಿತಿಗಳು, ಬರಹಗಾರರು ಹಾಗೂ ರಾಜಕೀಯ ನಾಯಕರು ನಡೆಸಿದ ನಿರಂತರ ಹೋರಾಟ ಮತ್ತು ತ್ಯಾಗದಿಂದ ಕರ್ನಾಟಕ ಏಕೀಕರಣ ಸಾಧ್ಯವಾಯಿತು ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿಯೂ ವಿವಿಧ ಹಂತಗಳಲ್ಲಿ ನಡೆದಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಅಂದು ಕನ್ನಡ ಭಾಷಿಕ ಪ್ರದೇಶಗಳು ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಪ್ರಾಂತ್ಯಗಳ ಆಡಳಿತಕ್ಕೆ ಒಳಪಟ್ಟಿದ್ದವು. ಈ ಪ್ರದೇಶಗಳಲ್ಲಿ ಆಡಳಿತ ಭಾಷೆ ಮತ್ತು ಜನರ ಆಡುಭಾಷೆಯ ನಡುವೆ ವ್ಯತ್ಯಾಸವಿತ್ತು. ಮುಂಬೈ ಪ್ರಾಂತ್ಯದಲ್ಲಿ ಮರಾಠಿ, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಮತ್ತು ತೆಲುಗು, ಹೈದರಾಬಾದ್ ಪ್ರಾಂತ್ಯದಲ್ಲಿ ಉರ್ದು ಹಾಗೂ ಮೈಸೂರು ಸಂಸ್ಥಾನದಲ್ಲಿ ಕನ್ನಡ ಭಾಷೆಗೆ ಆಡಳಿತಾತ್ಮಕ ಪ್ರಾಮುಖ್ಯತೆ ಇತ್ತು ಎಂದು ವಿವರಿಸಿದರು.
ಕರ್ನಾಟಕ ಏಕೀಕರಣ ಚಳವಳಿಗೆ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಹರ್ಡೇಕರ್ ಮಂಜಪ್ಪ, ಸಿದ್ದಪ್ಪ ಕಂಬಳಿ ಮತ್ತು ಆರ್.ಎಚ್. ದೇಶಪಾಂಡೆ ಸೇರಿದಂತೆ ಅನೇಕ ಮಹನೀಯರು ಮಹತ್ವದ ಕೊಡುಗೆ ನೀಡಿದ್ದಾರೆ. 1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ನಡೆದ ಪ್ರಯತ್ನಗಳು ಹಾಗೂ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣಕ್ಕಾಗಿ ವ್ಯಕ್ತವಾದ ಒತ್ತಾಯಗಳು ಚಳವಳಿಗೆ ಮಹತ್ವದ ತಿರುವು ನೀಡಿದವು ಎಂದರು.
ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಕನ್ನಡಿಗರಲ್ಲಿ ಏಕೀಕರಣದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಹಾಗೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಮೈಸೂರು ಅರಸರು ಸೇರಿದಂತೆ ಅನೇಕ ಗಣ್ಯರು ನೀಡಿದ ಕೊಡುಗೆಗಳು ಏಕೀಕರಣದ ಆಶಯಕ್ಕೆ ಮತ್ತಷ್ಟು ಬಲ ತುಂಬಿದವು ಎಂದು ಹೇಳಿದರು.
1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ಬೆಳವಣಿಗೆಯ ಹಿಂದೆ ಅನೇಕ ಹೋರಾಟಗಾರರ ಪರಿಶ್ರಮ ಮತ್ತು ತ್ಯಾಗ ಅಡಗಿದೆ ಎಂದು ಸ್ಮರಿಸಿದರು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಜೊತೆಗೆ ಕನ್ನಡದಲ್ಲಿ ಸಂಶೋಧನೆ, ಸಾಹಿತ್ಯ ರಚನೆ ಮತ್ತು ಜ್ಞಾನ ಸಂಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕನ್ನಡವು ಶಾಸ್ತ್ರೀಯ ಭಾಷೆಯಾಗಿದ್ದು, ಅದರ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಕೊಡುಗೆ ನೀಡಿ :
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಕರ್ನಾಟಕವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಸಾಧಿಸಬೇಕಾಗಿದೆ. ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ರಾಜ್ಯವು ಪ್ರಗತಿ ಹೊಂದಬೇಕು. ಪ್ರಧಾನಮಂತ್ರಿಯವರ ವಿಕಸಿತ ಭಾರತ 2047ರ ಕನಸಿನ ಸಾಕಾರದಲ್ಲಿ ಕರ್ನಾಟಕದ ಕೊಡುಗೆ ಮಹತ್ವದ್ದಾಗಿದೆ. ರಾಜ್ಯ ಸರ್ಕಾರದ ಆಶಯದಂತೆ 2037ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ನಂಜುಂಡಪ್ಪ ವರದಿ ಮತ್ತು ಗೋವಿಂದರಾವ್ ಸಮಿತಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜನರ ತಲಾ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಯೋಜಿತ ಪ್ರಯತ್ನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯೋತ್ಸವವು ಕೇವಲ ರಾಜ್ಯದ ಸಾಧನೆಗಳನ್ನು ಸಂಭ್ರಮಿಸುವ ದಿನವಾಗದೆ, ರಾಜ್ಯದ ಭವಿಷ್ಯದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಲು ಪ್ರೇರಣೆಯಾಗಬೇಕು. ಸರ್ಕಾರದ ಪ್ರಯತ್ನಗಳೊಂದೇ ಅಭಿವೃದ್ಧಿಗೆ ಸಾಕಾಗುವುದಿಲ್ಲ; ಪ್ರತಿಯೊಬ್ಬ ನಾಗರಿಕನ ಪರಿಶ್ರಮ ಮತ್ತು ಸಕ್ರಿಯ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ವಿಶ್ವವಿದ್ಯಾಲಯವು ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ಪಡೆದು ಸಂಶೋಧನೆ, ಶಿಕ್ಷಣ, ಸಮಾಜಸೇವೆ ಮತ್ತು ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಮ ಅವಕಾಶ ಹೊಂದಿದೆ. ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಸಂಶೋಧನೆ ನಡೆಸುವುದರ ಜೊತೆಗೆ ಗ್ರಾಮೀಣ ಜನರಿಗೆ ಶಿಕ್ಷಣ, ಉದ್ಯೋಗಾವಕಾಶ, ಸಣ್ಣ ಕೈಗಾರಿಕೆಗಳ ಸ್ಥಾಪನೆ ಮತ್ತು ಸ್ವಾವಲಂಬಿ ಬದುಕಿಗೆ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಡಾ. ಗಣಪತಿ ಬಿ. ಸಿನ್ನೂರು ಸ್ವಾಗತಿಸಿದರು. ಪ್ರೊ. ಪಾಂಡುರಂಗ ವಿ. ಪತ್ತಿ ವಂದಿಸಿದರು. ಡಾ. ಸಫಿಯಾ ಪರ್ವಿನ್ ನಿರೂಪಿಸಿದರು.
ವಂದೇ ಮಾತರಂ ಮತ್ತು ನಾಡಗೀತೆ ಗಾಯನದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಸಂಗೀತ ಮತ್ತು ಲಲಿತಕಲೆ ವಿಭಾಗದ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಬಸವರಾಜ ಡೋಣೂರು, ಪ್ರೊ. ಚನ್ನವೀರ ಆರ್.ಎಂ., ಪ್ರೊ. ವಿಕ್ರಮ ವಿಸಾಜಿ, ಪ್ರೊ. ಜಿ.ಆರ್. ಅಂಗಡಿ, ಪ್ರೊ. ಎನ್. ಸತ್ಯನಾರಾಯಣ, ಪ್ರೊ. ಬಸವರಾಜ ಎಂ. ಕುಬಕಡ್ಡಿ, ಪ್ರೊ. ಶಿವಗಂಗಾ ರುಮ್ಮಾ, ಪ್ರೊ. ಮೊಹಮ್ಮದ್ ಜೊಹೇರ್, ಪ್ರೊ. ವಿಜಯಕುಮಾರ್, ಪ್ರೊ. ದೇವರಾಜಪ್ಪ, ಪ್ರೊ. ಜಯವೇಲ್ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






