Kalaburagi | ಕೆಬಿಎನ್ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸಭೆ: ಬಡ್ಡಿರಹಿತ ಸಾಲ ಯೋಜನೆಗೆ ಚಿಂತನೆ

ಕಲಬುರಗಿ: ಖಾಜಾ ಬಂದನವಾಜ್ ಅಲ್ಪಸಂಖ್ಯಾತ ಸೌಹಾರ್ದ ಸಹಕಾರ ಸಂಘ ನಿಯಮಿತದ 2025–26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ನಗರದ ಕೆಬಿಎನ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹಾಗೂ ವಕ್ಫ್ ಮಂಡಳಿ ಅಧ್ಯಕ್ಷ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಗ್ರಾಹಕರೇ ಪ್ರಮುಖ ಆಧಾರವಾಗಿದ್ದು, ಸೌಹಾರ್ದ ಸಂಸ್ಥೆಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಸಮುದಾಯ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬಡ್ಡಿರಹಿತ ಸ್ಥಿರ ಠೇವಣಿ (ಫಿಕ್ಸ್ಡ್ ಡೆಪಾಸಿಟ್) ಸ್ವೀಕರಿಸಿ, ಅದರಿಂದ ಬಡವರು ಹಾಗೂ ಅಗತ್ಯವಿರುವವರಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ರೂಪಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೌಹಾರ್ದ ಸಹಕಾರಿಗಳ ವಿಭಾಗೀಯ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ್, ಸದಸ್ಯರು ಠೇವಣಿ ಇಡುವುದರ ಜೊತೆಗೆ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಆರ್ಥಿಕ ಸ್ಥಿರತೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ 2026–27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಲಾಯಿತು. ಕಾರ್ಯದರ್ಶಿ ಮೊಹಮ್ಮದ್ ಮೊಯಿನುದ್ದೀನ್ ವಾರ್ಷಿಕ ವರದಿ ಮಂಡಿಸಿ, ಕಳೆದ ವರ್ಷದಿಂದ ಸಾಲ ಪಡೆಯುವವರಿಗೆ ವಿಮೆ ಕಡ್ಡಾಯಗೊಳಿಸಿರುವುದಾಗಿ ತಿಳಿಸಿದರು. ವಾರ್ಷಿಕ ಡಿವಿಡೆಂಡ್ ಅನ್ನು ಸಾಮಾಜಿಕ ಉಪಯೋಗಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಅತಿ ಹೆಚ್ಚು ಷೇರು ಹೊಂದಿದ್ದ ಸೈಯದ್ ಮುರ್ತುಜಾ ಅಲ್ ಹುಸ್ಸೇನಿ ಹಾಗೂ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದ ಗ್ರಾಹಕರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಡಾ.ಮುಸ್ತಫಾ ಅಲ್ ಹುಸ್ಸೇನಿ, ಡಾ. ರುಕ್ಸರ್ ಫಾತಿಮಾ, ನಾಜಿಯಾ ಸುಲ್ತಾನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






