ಕಲಬುರಗಿ | ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ
ಗ್ರಾಮಸ್ಥರಿಂದ ಪ್ರತಿಭಟನೆ

ರವಿಕುಮಾರ್
ಕಲಬುರಗಿ : ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಂಚೋಳಿ ತಾಲೂಕಿನ ಶಾಲೆ ಬೀರನಹಳ್ಳಿ ಗ್ರಾಮದ ರವಿಕುಮಾರ್ (26) ಮೃತ ಯುವಕ ಎಂದು ತಿಳಿದುಬಂದಿದೆ.
ಕೂಲಿ ಕೆಲಸ ಮಾಡುತ್ತಿದ್ದ ರವಿಕುಮಾರ್, ಭಾನುವಾರ ಗ್ರಾಮದಲ್ಲಿ ಲಾರಿಯಿಂದ ಪರ್ಸಿ ಇಳಿಸುವಾಗ ಮಧುಸೂದನ್ ಎಂಬವರು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎಂದು ಮೃತ ವ್ಯಕ್ತಿಯ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಸ್ಥರು, ಮುಖಂಡರಿಂದ ಪ್ರತಿಭಟನೆ :
ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ಸರಕಾರದಿಂದ 50 ಲಕ್ಷ ರೂ. ಪರಿಹಾರ ಮತ್ತು ಸಮಾಜಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ, ಗ್ರಾಮ ಪಂಚಾಯತ್ ಸದಸ್ಯರಾದ ಸಂಜು ಕುಮಾರ್, ಮುಖಂಡರಾದ ಗಂಗಾಧರ್ , ಮಾಣಿಕ್ ರಾವ್ ಮತ್ತು ನೂರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಗ್ರಾಮಸ್ಥರು ತಾಲೂಕಿನ ಡಿಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ಕುರಿತು ಚಿಂಚೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.







