Kalaburagi | ಕಲ್ಯಾಣ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ತ್ವರಿತ ಕ್ರಮಕ್ಕೆ ಕೆಕೆಸಿಸಿಐ ಒತ್ತಾಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವತಿಯಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್‌ಕೆಸಿಸಿಐ) ವತಿಯಿಂದ ಜುಲೈ 24ರಂದು ಆಯೋಜಿಸಿದ್ದ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಂವಾದ ಸಭೆಯಲ್ಲಿ ಕೆಕೆಸಿಸಿಐ ನಿಯೋಗ ಭಾಗವಹಿಸಿ, ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆಗಳು ಹಾಗೂ ಎಂಎಸ್‌ಎಂಇ ವಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ಮನವಿಪತ್ರ ಸಲ್ಲಿಸಿತು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ, ಕೈಗಾರಿಕೆ ಮತ್ತು ಎಂಎಸ್‌ಎಂಇ ಸಮಿತಿ ಸಂಚಾಲಕರಾದ ಅಭಿಜಿತ್ ಪಡಶೆಟ್ಟಿ ಹಾಗೂ ಸಂತೋಷ್ ಸುರೇಶ್ ನಂದ್ಯಾಳ ಅವರು ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅವರ ಸಮ್ಮುಖದಲ್ಲಿ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್‌ನ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅಗತ್ಯ ಮೂಲಸೌಕರ್ಯ ಹಾಗೂ ಅನುಮೋದನೆಗಳನ್ನು ಶೀಘ್ರ ಒದಗಿಸುವಂತೆ ಒತ್ತಾಯಿಸಲಾಯಿತು.
ಇದಲ್ಲದೆ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿನ ಬಾಕಿ ಉಳಿದಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಜಿಲ್ಲಾ ಮಟ್ಟದ ಕೆಐಎಡಿಬಿ ಅಧಿಕಾರಿಗಳಿಗೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ನೀಡುವುದು ಹಾಗೂ ಪ್ರಕ್ರಿಯಾತ್ಮಕ ವಿಳಂಬದಿಂದ ಸಂಕಷ್ಟದಲ್ಲಿರುವ ಕೈಗಾರಿಕಾ ನಿವೇಶನಗಳಿಗೆ ಎರಡು ವರ್ಷಗಳ ಕಾಲಾವಕಾಶ ವಿಸ್ತರಣೆ ನೀಡುವಂತೆ ಮನವಿ ಮಾಡಲಾಯಿತು.
ಜಿಲ್ಲಾ ಮಟ್ಟದ ಏಕಗವಾಕ್ಷಿ ಯೋಜನಾ ಅನುಮೋದನೆ ಹಾಗೂ ಭೂಮಿ ಹಂಚಿಕೆ ಮಿತಿಯನ್ನು ಹೆಚ್ಚಿಸುವುದು, ಕೈಗಾರಿಕೆಗಳಿಗೆ ಬಾಕಿ ಉಳಿದಿರುವ ಬಂಡವಾಳ ಸಹಾಯಧನ ಬಿಡುಗಡೆ ಮಾಡುವುದು, ಕಪನೂರ ಕೈಗಾರಿಕಾ ಪ್ರದೇಶದ (ಹಂತ–1) ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ಕೈಗಾರಿಕಾ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಂತೆ ಸಹ ಒತ್ತಾಯಿಸಲಾಯಿತು.
ಮನವಿಗೆ ಸ್ಪಂದಿಸಿದ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 400 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.






