Kalaburagi | ಕೆಕೆಆರ್‌ಟಿಸಿ ಮೃತ ನೌಕರರ ಕುಟುಂಬಗಳಿಗೆ ತಲಾ 12.50 ಲಕ್ಷ ರೂ. ಪರಿಹಾರ ಧನ ವಿತರಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿದ ಹಾಗೂ ಅಪಘಾತದಲ್ಲಿ ಮೃತಪಟ್ಟ ಚಾಲಕರು ಮತ್ತು ನೌಕರರ 18 ಕುಟುಂಬಗಳಿಗೆ ತಲಾ 12.50 ಲಕ್ಷ ರೂ. ಹಾಗೂ ಸುತ್ತೋಲೆ-2021ರ ಅನ್ವಯ ಎರಡು ಕುಟುಂಬಗಳಿಗೆ ತಲಾ 10 ಲಕ್ಷ ರೂ. ನಂತೆ ಒಟ್ಟು 2.45 ಕೋಟಿ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ತಿಳಿಸಿದರು.
ಸೋಮವಾರ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಸಭಾಂಗಣದಲ್ಲಿ ಆಂತರಿಕ ಗುಂಪು ವಿಮಾ ಯೋಜನೆಯಡಿ ಮೃತ ನೌಕರರ ಕುಟುಂಬಗಳಿಗೆ ಪರಿಹಾರದ ಚೆಕ್‌ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸಂಸ್ಥೆಯು ಕೇವಲ ಉದ್ಯೋಗ ನೀಡುವ ಸ್ಥಳವಲ್ಲ, ಅದೊಂದು ಕುಟುಂಬವಿದ್ದಂತೆ. ನೌಕರರ ಹಠಾತ್ ಅಗಲಿಕೆಯಿಂದ ಅವರ ಕುಟುಂಬಗಳು ಎದುರಿಸುವ ನೋವು ಸಂಸ್ಥೆಯದ್ದೂ ಆಗಿದೆ. ಮೃತ ನೌಕರರ ಕುಟುಂಬಸ್ಥರಿಗೆ ನಿಯಮಾನುಸಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಂಸ್ಥೆ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಪರಿಹಾರವಾಗಿ ದೊರೆತ ಹಣವನ್ನು ಮಧ್ಯವರ್ತಿಗಳ ಮಾತಿಗೆ ಮರುಳಾಗದೆ ಸುರಕ್ಷಿತವಾಗಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಭವಿಷ್ಯಕ್ಕಾಗಿ ಬಳಸಿಕೊಳ್ಳುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಮಾತನಾಡಿ, ಸೇವೆಯಲ್ಲಿದ್ದಾಗ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ತೀವ್ರ ದುಃಖದ ಸಂಗತಿ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲದಿದ್ದರೂ, ಕುಟುಂಬಗಳ ಭವಿಷ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಆಂತರಿಕ ಗುಂಪು ವಿಮಾ ಯೋಜನೆಯಡಿ ಪರಿಹಾರ ನೀಡಲಾಗುತ್ತಿದೆ ಎಂದರು.
ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಗಮದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣ ನಿಗಮದ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದರು. ಗಾಯಗೊಂಡ ಪ್ರಯಾಣಿಕರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ನಿಗಮವೇ ಭರಿಸಿದೆ. ಸಂತ್ರಸ್ತ ಕುಟುಂಬಗಳಿಗೆ ನಿಗಮವು ಸದಾ ನೈತಿಕ ಹಾಗೂ ಆರ್ಥಿಕ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಸುನೀಲಕುಮಾರ್ ಚೇಂದ್ರಗಿ ಮಾತನಾಡಿ, ಸಂಸ್ಥೆಯು 2008ರಿಂದ ಆಂತರಿಕ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಯೋಜನೆ ಇದೀಗ 12.50 ಲಕ್ಷ ರೂ. ವರೆಗೆ ಪರಿಹಾರ ನೀಡುವ ಮಟ್ಟಕ್ಕೆ ವಿಸ್ತರಿಸಿದೆ ಎಂದರು.
ನಿಗಮದ ಆಡಳಿತ ಮಂಡಳಿಯು ಬ್ಯಾಂಕ್‌ಗಳ ಒಪ್ಪಂದದೊಂದಿಗೆ ಕರ್ತವ್ಯ ನಿರತ ಸಂದರ್ಭದಲ್ಲಿ ಅಥವಾ ವೈಯಕ್ತಿಕ ಅಪಘಾತದಲ್ಲಿ ಮೃತಪಟ್ಟ ಚಾಲಕರು ಹಾಗೂ ಸಿಬ್ಬಂದಿಯ ಕುಟುಂಬಗಳಿಗೆ 1 ಕೋಟಿ ರೂ. ಭದ್ರತಾ ವಿಮೆ ಒದಗಿಸುತ್ತಿದೆ. ಸಾಮಾನ್ಯ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಗಳಿಗೆ 5 ರೂ. ನಿಂದ 6 ಲಕ್ಷ ರೂ. ವರೆಗೆ ಸಹಾಯಧನ ದೊರೆಯಲಿದೆ. ಪರಿಹಾರದ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಭವಿಷ್ಯಕ್ಕಾಗಿ ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಕೆ. ಆರ್.ಟಿ.ಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ, ಮುಖ್ಯ ಯಾಂತ್ರಿಕ ಇಂಜಿನಿಯರ ಸಂತೋಷಕುಮಾರ, ಮುಖ್ಯ ಲೆಕ್ಕಪತ್ರ ಅಧಿಕಾರಿ ಮತ್ತು ಹಣಕಾಸು ಸಲಹೆಗಾರ ಬಸವರಾಜ ಬೆಳಗಾವಿ, ಮುಖ್ಯ ಭದ್ರತೆ ಮತ್ತು ಜಾಗೃತಿ ಅಧಿಕಾರಿ ಬಸಪ್ಪ ಗುರಿಕಾರ, ಮುಖ್ಯ ಸಿಬ್ಬಂದಿ ಮತ್ತು ಸುರಕ್ಷತಾ ಅಧಿಕಾರಿ ಜಗದೀಶ, ಅನ್ವರ ಜಾವಿದ್, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.






