Kalaburagi | ಉದ್ಯಾನವನ ಜಾಗ ಅತಿಕ್ರಮಣ ತೆರವುಗೊಳಿಸಲು ಕೋಲಿ ಸಂಘರ್ಷ ಸಮಿತಿ ಆಗ್ರಹ

ಕಲಬುರಗಿ : ಕಲಬುರಗಿ ನಗರ ವ್ಯಾಪ್ತಿಯ ಬಡೇಪೂರ ಗ್ರಾಮದ ಸರ್ವೆ ನಂ. 83ರಲ್ಲಿ ಉದ್ಯಾನವನಕ್ಕಾಗಿ ಮೀಸಲಿರಿಸಿದ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಿ, ಉದ್ಯಾನವನವನ್ನು ಅಭಿವೃದ್ಧಿಪಡಿಸಬೇಕೆಂದು ಕರ್ನಾಟಕ ರಾಜ್ಯ ಕೋಲಿ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಕೋಡ್ಲಿ, ಉದ್ಯಾನವನಕ್ಕಾಗಿ ಮೀಸಲಾದ ಪ್ರದೇಶವನ್ನು ಕೆಲವರು ಅಕ್ರಮವಾಗಿ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಹಾನಿಗೊಳಗಾಗುತ್ತಿವೆ ಎಂದು ಆರೋಪಿಸಿದರು.
“ಉದ್ಯಾನವನ ಪ್ರದೇಶದಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು. ಜೊತೆಗೆ ಉದ್ಯಾನವನಕ್ಕೆ ‘ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನ’ ಎಂದು ನಾಮಕರಣ ಮಾಡಬೇಕು,” ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇದೇ ವೇಳೆ ಕೋಲಿ ಸಮಾಜದ ಮುಖಂಡ ದಿವಂಗತ ವಿಠಲ ಹೇರೂರ ಅವರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನದ ಸಮೀಪ ಸೇಡಂ ರಸ್ತೆಯಿಂದ ಸರ್ಕಾರಿ ಆಸ್ಪತ್ರೆಗೆ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ಶಹಾಬಾದ್ ರಸ್ತೆಯವರೆಗೆ ತಲಾ ಒಂದು ಬಸ್ ನಿಲ್ದಾಣ ನಿರ್ಮಿಸಬೇಕು. ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾಷ ಜಮಾದಾರ, ರಾಜ್ಯ ಉಪಾಧ್ಯಕ್ಷ ದತ್ತಪ್ಪ ಜಮಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಣಪತ್ತರಾವ್ ಅಂಕಲಗಿ, ಜಿಲ್ಲಾ ಉಪಾಧ್ಯಕ್ಷ ದಶರಥ ಹೆಚ್. ತೆಗನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿ. ಸಣ್ಣೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






