ಕಲಬುರಗಿ | ಇಜೇರಿ 2ನೇ ವಾರ್ಡ್‌ನಲ್ಲಿ ಮೂಲಸೌಕರ್ಯಗಳ ಕೊರತೆ: ನಿವಾಸಿಗಳ ಪರದಾಟ

ಯಡ್ರಾಮಿ: ತಾಲೂಕಿನ ಇಜೇರಿ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಸುಮಾರು 380ಕ್ಕೂ ಹೆಚ್ಚು ಜನರು ವಾಸವಿದ್ದು ಮೂಲಸೌಕರ್ಯಗಳ ಕೊರತೆಯಿಂದ ನಿವಾಸಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಹ ಇದೇ ರಸ್ತೆಯ ಮೂಲಕ ತೆರಳಬೇಕಾಗಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇದರೊಂದಿಗೆ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ಸ್ವಚ್ಛಗೊಳಿಸದ ಪರಿಣಾಮ ಚರಂಡಿ ನೀರು ರಸ್ತೆಯ ಮೇಲೆ ಸಂಗ್ರಹವಾಗುತ್ತಿದೆ. ಇದರಿಂದ ದುರ್ವಾಸನೆ ಹರಡುವುದರ ಜತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಡೆಂಗ್ಯೂ ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ನಿವಾಸಿಗಳಲ್ಲಿ ಮೂಡಿದೆ.
ಇನ್ನು ಸುಮಾರು ಮೂರು ತಿಂಗಳ ಹಿಂದೆ ವಾರ್ಡ್‌ನ ಬೀದಿ ದೀಪಗಳು ಕೆಟ್ಟುಹೋಗಿದ್ದುಇದುವರೆಗೆ ದುರಸ್ತಿ ಮಾಡಿಲ್ಲ. ರಾತ್ರಿ ವೇಳೆ ವಾರ್ಡ್‌ನ ರಸ್ತೆಗಳು ಕತ್ತಲಿನಿಂದ ಕೂಡಿದ್ದು ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಪರ್ಯಾಸವೆಂದರೆ ಇಜೇರಿ ಗ್ರಾಮದಲ್ಲೇ ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ವಾರ್ಡ್‌ನ ಮೂಲಭೂತ ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ರಸ್ತೆ ದುರಸ್ತಿ, ಒಳಚರಂಡಿ ಸ್ವಚ್ಛತೆ ಹಾಗೂ ಬೀದಿ ದೀಪಗಳ ದುರಸ್ತಿ ಕೈಗೊಂಡು ವಾರ್ಡ್‌ನ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಎಸ್.ಕೆ ಎಚ್ಚರಿಸಿದ್ದಾರೆ.






