Kalaburagi | ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ : ಡಾ.ಲಕ್ಷ್ಮಣ ದಸ್ತಿ
ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು; ಸ್ಥಳೀಯ ಸಾಹಿತ್ಯ, ಇತಿಹಾಸ ಪಠ್ಯಗಳಲ್ಲಿ ಸೇರಿಸಲು ನಿರ್ಣಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎಂದು ಕಲ್ಯಾಣ ಕರ್ನಾಟಕ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದಂದು ಡಾ. ಚಂದ್ರಕಲಾ ಬಿದರಿ ವೇದಿಕೆಯಲ್ಲಿ ಆಯೋಜಿಸಿದ್ದ ‘ಅರಿವಿನ ತೊರೆ’ ವಿಶೇಷ ಗೋಷ್ಠಿಯಲ್ಲಿ ‘ಕಲ್ಯಾಣ ಕರ್ನಾಟಕದ ಬೆಳವಣಿಗೆಯಲ್ಲಿ ಸಾಧಕ-ಬಾಧಕ’ ವಿಷಯ ಕುರಿತು ಅವರು ಮಾತನಾಡಿದರು.
ಈ ಭಾಗದಲ್ಲಿ ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನ ಪಡೆಯುವಂತಾಗಬೇಕು. ಇದಕ್ಕಾಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆಧುನಿಕ ತಂತ್ರಜ್ಞಾನದಿಂದ ಕೃಷಿ ಲಾಭದಾಯಕ :
‘ಕೃಷಿ ವಿಕಾಸ-ಒಂದು ಚಿಂತನೆ’ ವಿಷಯ ಕುರಿತು ಮಾತನಾಡಿದ ಕೃಷಿ ಪಂಡಿತ ಶರಣಬಸಪ್ಪ ಪಾಟೀಲ ಹಾಲಸುಲ್ತಾನಪೂರ, ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದರಿಂದ ಕೃಷಿಯನ್ನು ಮತ್ತಷ್ಟು ಲಾಭದಾಯಕವಾಗಿಸಲು ಸಾಧ್ಯ ಎಂದರು.
‘ಸಮಾಜ ಪರಿವರ್ತನೆಯಲ್ಲಿ ವಚನ ಮತ್ತು ಸಂವಿಧಾನದ ಪಾತ್ರ’ ಕುರಿತು ಮಾತನಾಡಿದ ನ್ಯಾಯವಾದಿ ಡಾ. ಜಗನ್ನಾಥ ತರನಳ್ಳಿ, ಮೌಢ್ಯಾಚರಣೆ, ಜಾತಿ ವ್ಯವಸ್ಥೆ ಹಾಗೂ ದೌರ್ಜನ್ಯಗಳ ವಿರುದ್ಧ ಬಸವಾದಿ ಶರಣರು ಹೋರಾಟ ನಡೆಸಿದರು. ಸಂವಿಧಾನ ಜಾರಿಯಾದ ಬಳಿಕ ಕಾನೂನಿನ ಮೂಲಕ ಸಾಮಾಜಿಕ ಅನ್ಯಾಯಗಳನ್ನು ಪ್ರಶ್ನಿಸಿ, ಪರಿಹಾರ ಕಂಡುಕೊಳ್ಳುವ ಅವಕಾಶ ದೊರೆಯಿತು ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಶಾಂತವೀರ ಹೀರಾಪೂರ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ದೇಸಾಯಿ, ರೇಣುಕಾ ಡಾಂಗೆ, ನಂದಿನಿ ಸನಬಾಳ, ಚಂದ್ರಕಾಂತ ಏರಿ, ಶ್ರೀಮಂತ ಪಟ್ಟೇದಾರ, ಡಾ. ನಾಗವೇಣಿ ಪಾಟೀಲ, ಸಾವಿತ್ರಿ ಪಾಟೀಲ, ಪ್ರಿಯಾಂಕಾ ಪಾಟೀಲ, ವೆಂಕುಬಾಯಿ ರಜಪೂತ, ಸಿದ್ಧಲಿಂಗ ಬಾಳಿ, ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಹಾಗೂ ಶರಣರಾಜ ಛಪ್ಪರಬಂದಿ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಮಹಾದೇವ ಬಡಾ ಅವರ ಚೊಚ್ಚಲ ಕೃತಿ ‘ರಟಕಲ್ಲ ಮುಕುಟ’ವನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಲೋಕಾರ್ಪಣೆಗೊಳಿಸಿದರು. ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ ಅವರ ಬದುಕು-ಬರಹ ಕುರಿತು ಹಾವೇರಿಯ ಡಾ. ಪುಷ್ಪಾ ಶಲವಡಿಮಠ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸೇವಾ ಕಲಾ ಕೌಶಲ್ಯ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಮಹಿಳಾ ಕಾವ್ಯ ಕಹಳೆ’ ವಿಶೇಷ ಕವಿಗೋಷ್ಠಿಯಲ್ಲಿ ಕವಯತ್ರಿಯರು ಕೃಷಿ, ಬದುಕು, ಸಮಾಜ, ಜಾತೀಯತೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತು ಕವಿತೆಗಳನ್ನು ವಾಚಿಸಿದರು.
ಸಾಹಿತ್ಯ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿ ಸಂಬಂಧಗಳನ್ನು ಬೆಸೆಯುತ್ತದೆ :
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಸಾಹಿತ್ಯವು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವುದರ ಜತೆಗೆ ಜನರನ್ನು ಚಿಂತನೆಗೆ ಹಚ್ಚುತ್ತದೆ. ಸಾಹಿತ್ಯ ಎಂದಿಗೂ ತಾರತಮ್ಯ ಮಾಡುವುದಿಲ್ಲ; ಬದಲಾಗಿ ಜನರ ನಡುವೆ ಸಾಮರಸ್ಯವನ್ನು ಬೆಸೆಯುತ್ತದೆ ಎಂದರು.
ಒತ್ತಡದ ಜೀವನದಲ್ಲಿ ಮಾನವೀಯ ಸಂಬಂಧಗಳು ದುರ್ಬಲವಾಗುತ್ತಿದ್ದು, ಅಣ್ಣ-ತಮ್ಮಂದಿರ ನಡುವೆಯೂ ಪರಸ್ಪರ ನಂಬಿಕೆ ಕಡಿಮೆಯಾಗುತ್ತಿದೆ. ಇಂತಹ ಸಂಬಂಧಗಳನ್ನು ಮತ್ತೆ ಗಟ್ಟಿಗೊಳಿಸಲು ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರ ಅಗತ್ಯ. ನಾವು ಮಾಡುವ ಕೆಲಸಕ್ಕೆ ಟೀಕೆ-ಟಿಪ್ಪಣಿಗಳು ಬಂದರೂ ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ ಸರ್ಕಾರ ಸೂಕ್ತ ಗೌರವ ನೀಡಬೇಕು. ಅವರ ಹೆಸರಿನಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಗೌರವಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವನಗೌಡ ಪಾಟೀಲ, ನರಸಪ್ಪ ರಂಗೋಲಿ, ಸೇವಂತಾ ಚವ್ಹಾಣ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ವಿದ್ಯಾಸಾಗರ ದೇಶಮುಖ, ಅನೀಲಕುಮಾರ ಸುಂಠಾಣ, ಚನ್ನಮಲ್ಲಯ್ಯ ಹಿರೇಮಠ, ರವೀಂದ್ರಕುಮಾರ ಭಂಟನಳ್ಳಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ ಹಾಗೂ ಪ್ರಕಾಶ ಗೋಣಗಿ ಉಪಸ್ಥಿತರಿದ್ದರು.
ಸ್ಥಳೀಯ ಸಾಹಿತ್ಯ, ಇತಿಹಾಸವನ್ನು ಪಠ್ಯಕ್ರಮಕ್ಕೆ ಸೇರಿಸಲು ನಿರ್ಣಯ :
ಕಸಾಪ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಸಮ್ಮೇಳನದಲ್ಲಿ ಎರಡು ನಿರ್ಣಯಗಳನ್ನು ಮಂಡಿಸಿದರು. ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ ಹಾಗೂ ಪ್ರೇಕ್ಷಕರು ನಿರ್ಣಯಗಳನ್ನು ಅನುಮೋದಿಸಿದರು.
ಸ್ಥಳೀಯ ಸಾಹಿತಿಗಳ ಸಾಹಿತ್ಯ ಕೃತಿಗಳು ಮತ್ತು ಸ್ಥಳೀಯ ಇತಿಹಾಸವನ್ನು ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದ ಹಂತದವರೆಗಿನ ಪಠ್ಯಕ್ರಮಗಳಲ್ಲಿ ಸೇರಿಸಬೇಕು ಎಂಬುದು ಮೊದಲ ನಿರ್ಣಯವಾಗಿದೆ.
ರೈತರಿಗೆ ಆರ್ಥಿಕ ಬಲ ನೀಡುವ ಯೋಜನೆಗಳನ್ನು ರೂಪಿಸಿ, ನಿಗದಿತ ಮಿತಿಯೊಳಗಿನ ಪಹಣಿದಾರರಿಗೆ ಮಾಸಿಕ ಭತ್ಯೆ ನಿಗದಿಪಡಿಸಬೇಕು ಎಂಬುದು ಎರಡನೇ ನಿರ್ಣಯವಾಗಿದೆ.
ಈ ಮೂಲಕ ಎರಡು ದಿನಗಳ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು.






