ಕಲಬುರಗಿ | ಭಾಷೆ ಜನರನ್ನು ಒಗ್ಗೂಡಿಸುತ್ತದೆ : ಡಾ.ಕಿರಣ ಗಾಜನೂರು

ಕಲಬುರಗಿ: ಭಾಷೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಭಾಷೆಯು ಆಲೋಚನೆ, ಭಾವನೆ ಹಂಚಿಕೊಳ್ಳಲು, ಜ್ಞಾನ ಪಡೆಯಲು, ಸಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಪೀಳಿಗೆಗೆ ಸಾಗಿಸಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ.ಕಿರಣ ಗಾಜನೂರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಖ್ವಾಜಾ ಬಂದೇ ನವಾಜ್ ವಿವಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮನುಷ್ಯ ಭಾಷೆಯ ಮೂಲಕವೇ ಎಲ್ಲಾ ವಿಷಯಗಳನ್ನು ಕಲಿಯುತ್ತಾನೆ. ಭಾಷೆ ಸಾಹಿತ್ಯಿಕ ಕೃತಿಗಳ ಸೃಷ್ಟಿಗೆ ಅವಕಾಶ ನೀಡುತ್ತದೆ, ಅದು ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯ ಮತ್ತು ಕಾವ್ಯ ಪರಂಪರೆ ಇದೆ ಎಂದು ಕನ್ನಡ ಭಾಷಾ ಶ್ರೀಮಂತಿಕೆಯನ್ನು ಹೊಗಳಿದರು. ಕನ್ನಡವನ್ನು ಮಾತನಾಡುತ್ತ, ಇನ್ನೊಬ್ಬರಿಗೆ ಕಲಿಸುತ್ತ ಕನ್ನಡ ಭಾಷೆಯನ್ನು ಉಳಿಸುವುದು ಬೆಳೆಸುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ ಎಂದರು.
ಕೆಬಿಎನ್ ವಿವಿಯ ಸಮ ಉಪಕುಲಪತಿ ಪ್ರೊ. ಅಶ್ಫಕ್ ಅಹ್ಮದ್ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸ 2,000 ವರ್ಷಗಳಷ್ಟು ಹಳೆಯದು. ಸ್ವಾತಂತ್ರೋತ್ತರ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ರಾಜ್ಯವಾಗಿದ್ದು, 1973ರಲ್ಲಿ ಕರ್ನಾಟಕವೆಂದು ಮರುನಾಮಕರಣವಾಗಿದೆ ಎಂದರು.
ಡೀನ್ ಡಾ.ನಿಶಾತ ಆರೀಫ ಹುಸ್ಸೇನಿ ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಉರ್ದು ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ಅಬ್ದುಲ್ ಸಮದ್ ಪ್ರಾ ರ್ಥಿಸಿದರು. ಬಯೋ ಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬದರಿನಾಥ ಕುಲಕರ್ಣಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಸಹಾಯಕ ಪ್ರದ್ಯಾಪಕ ಡಾ.ಅಸ್ಲಮ್ ಪರಿಚಯಿಸಿದರು. ಕನ್ನಡ ವಿಭಾಗದ ಪ್ರಧ್ಯಪಾಕ, ಡಾ.ಸಂಗನಗೌಡ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಮೀನಾ ನಿರೂಪಿಸಿದರೆ, ಇತಿಹಾಸ ವಿಭಾಗದ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೇಶ್ ರಾಠೋಡ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ರಾಜಪಟೇಲ್ ವಂದಿಸಿದರು.







