Kalaburagi | ಜಪಾನೀಸ್, ಜರ್ಮನ್, ಸ್ಪ್ಯಾನಿಷ್‌ಗೆ ಬಸವ ವಚನ ಸಂಪುಟಗಳ ಲೋಕಾರ್ಪಣೆ

ಕಲಬುರಗಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ಬಸವ ಪೀಠ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಬಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜಪಾನೀಸ್, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಗೊಂಡ ಕನ್ನಡ ವಚನ ಸಂಪುಟಗಳ ಲೋಕಾರ್ಪಣೆ ಸಮಾರಂಭ ಮಂಗಳವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಡಾ.ಅರವಿಂದ ಜತ್ತಿ, ಮಾನವೀಯತೆಯೇ ಬಸವಣ್ಣನವರ ಧರ್ಮದ ಮೂಲ ತತ್ವವಾಗಿದ್ದು, ಸಮಾನತೆ, ಕರುಣೆ ಮತ್ತು ಸಾಮಾಜಿಕ ಸಾಮರಸ್ಯ ಸಾರುವ ಅವರ ವಚನಗಳು ಇಂದಿಗೂ ವಿಶ್ವಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
2002ರಲ್ಲಿ ದಿವಂಗತ ಡಾ. ಎಂ.ಎಂ. ಕಲಬುರ್ಗಿ ಅವರ ಪ್ರೇರಣೆಯಿಂದ ಆರಂಭವಾದ ಈ ಯೋಜನೆಯಡಿ ಸಿಯುಕೆಯ ಸಹಕಾರದೊಂದಿಗೆ ಸುಮಾರು 2,500 ವಚನಗಳನ್ನು ಜಪಾನೀಸ್, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ. ಇದು ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವದ ಸಾಧನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಬಸವಣ್ಣನವರ ತತ್ವಶಾಸ್ತ್ರವು ದುರಾಸೆ, ಭ್ರಷ್ಟಾಚಾರ, ಅಸಮಾನತೆ ಹಾಗೂ ಪರಿಸರ ನಾಶದಂತಹ ಇಂದಿನ ಜಾಗತಿಕ ಸವಾಲುಗಳಿಗೆ ಶಾಶ್ವತ ಪರಿಹಾರಗಳನ್ನು ನೀಡುತ್ತದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ–2020ರ ಆಶಯದಂತೆ ಭಾರತೀಯ ಜ್ಞಾನ ಪರಂಪರೆಯನ್ನು ವಿಶ್ವದ ವಿವಿಧ ಭಾಷೆಗಳಿಗೆ ಪರಿಚಯಿಸುವಲ್ಲಿ ಈ ಅನುವಾದ ಕಾರ್ಯ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ರಮೇಶ್ ಮಾತನಾಡಿ, ಬಸವಣ್ಣನವರ ವಚನಗಳು ಸಾಮಾಜಿಕ ನ್ಯಾಯ, ಸಮಾನತೆ, ಲಿಂಗ ಸಮಾನತೆ ಹಾಗೂ ಮಾನವ ಘನತೆಯ ಮೌಲ್ಯಗಳನ್ನು ಪ್ರತಿಪಾದಿಸುವ ವಿಶ್ವಮಾನವೀಯ ಸಾಹಿತ್ಯವಾಗಿದ್ದು, ಅವುಗಳನ್ನು ಅಂತರರಾಷ್ಟ್ರೀಯ ಭಾಷೆಗಳಿಗೆ ಅನುವಾದಿಸಿರುವುದು ಐತಿಹಾಸಿಕ ಸಾಧನೆ ಎಂದು ಶ್ಲಾಘಿಸಿದರು.
ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ವಚನಗಳ ಅನುವಾದವು ಕೇವಲ ಪುಸ್ತಕ ಪ್ರಕಟಣೆಯಲ್ಲ; ಅದು ಮಾನವೀಯತೆಯ ಬೌದ್ಧಿಕ ಪರಂಪರೆಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.
ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ. ಸಿನ್ನೂರ್ ಸ್ವಾಗತಿಸಿ, ಬಸವ ಸಮಿತಿ ಹಾಗೂ ಸಿಯುಕೆಯ ಸಹಕಾರದಿಂದ ಬಸವಣ್ಣನವರ ತತ್ವಶಾಸ್ತ್ರವನ್ನು ವಿಶ್ವದ ವಿವಿಧ ಭಾಷೆಗಳ ಮೂಲಕ ಜಾಗತಿಕ ಓದುಗರಿಗೆ ತಲುಪಿಸುವ ಕನಸು ಸಾಕಾರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜರ್ಮನ್ ಭಾಷೆಗೆ ಅನುವಾದ ಮಾಡಿದ ಪ್ರೊ. ಬಾನುಮತಿ, ಜಪಾನೀಸ್ ಭಾಷೆಗೆ ಅನುವಾದಿಸಿದ ಪ್ರೊ. ಸುಧಾ ಶ್ರೀಧರ್ ಮತ್ತು ಡಾ. ಪಿಯ್ಯಾಲಿ ರಾಯ್, ಸ್ಪ್ಯಾನಿಷ್ ಭಾಷೆಗೆ ಅನುವಾದಿಸಿದ ಡಾ. ಪಿ. ಕುಮಾರ್ ಮಂಗಲಂ ಹಾಗೂ ಡಾ. ಶಿವಂ ಮಿಶ್ರಾ ಅವರನ್ನು ಸನ್ಮಾನಿಸಲಾಯಿತು.
ಬಳಿಕ “ವಚನಗಳನ್ನು ಅನುವಾದಿಸುವಲ್ಲಿನ ಸವಾಲುಗಳು” ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು. ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರು ಅಧ್ಯಕ್ಷತೆ ವಹಿಸಿ, ಭಾಷಾ, ಸಾಂಸ್ಕೃತಿಕ ಹಾಗೂ ತಾತ್ವಿಕ ಸವಾಲುಗಳ ಕುರಿತು ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಾನವಶಾಸ್ತ್ರ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ಪ್ರೊ. ಚನ್ನವೀರ ಆರ್.ಎಂ., ಪ್ರೊ. ಬಸವರಾಜ ಕುಬಕಡ್ಡಿ, ಪ್ರೊ. ಆರ್.ಎಸ್. ಹೆಗಡಿ, ಪ್ರೊ. ದೇವರಾಜಪ್ಪ ಸೇರಿದಂತೆ ಹಲವು ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಆಶಿಶ್ ಬೆಳಂಕರ್ ಕಾರ್ಯಕ್ರಮ ನಿರೂಪಿಸಿದರು.






