ಕಲಬುರಗಿ | ಇ-ಖಾತಾ ಅಭಿಯಾನಕ್ಕೆ ಚಾಲನೆ
ಪಾಲಿಕೆಗೆ ಅರ್ಜಿ ಸಲ್ಲಿಸಿ 7 ದಿನದಲ್ಲಿಯೇ ಇ-ಖಾತಾ ಪಡೆಯಿರಿ : ಅವಿನಾಶ ಶಿಂಧೆ

ಕಲಬುರಗಿ : ಕರ್ನಾಟಕ ಸರ್ಕಾರವು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಅಭಿಯಾನಕ್ಕೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಪಾಲಿಕೆ ವಲಯ ಆಯುಕ್ತರ ಕಚೇರಿಗಳಿಗೆ ನಿಗದಿತ ಅರ್ಜಿ ಸಲ್ಲಿಸಿ 7 ದಿನದಲ್ಲಿಯೇ ಇ-ಖಾತಾ ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಸಂಜೀವನ್ ಶಿಂಧೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ ಬರುವ ಮೇ 10 ರೊಳಗಾಗಿ ಇ-ಖಾತಾ ನೀಡಲು ಉದ್ದೇಶಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ-ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಅನಧಿಕೃತ ಸ್ವತ್ತುಗಳ ಮಾಲೀಕರು ಸಹ ತಮ್ಮ ಸ್ವತ್ತಿನ ಕಂದಾಯವನ್ನು ಪಾವತಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದಿದ್ದಾರೆ.
‘ಎ’ ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿ.ಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಜಿಪಿಎಸ್ ವಿವರದ ಫೋಟೋ ಹಾಗೂ ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು.
ಅದೇ ರೀತಿಯಲ್ಲಿ ‘ಬಿ’ ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿ.10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಜಿ.ಪಿ.ಎಸ್. ವಿವರದ ಫೋಟೋ ಹಾಗೂ ಮಾಲೀಕರ ಗುರುತಿನ ದಾಖಲೆ ಪ್ರತಿ ಲಗತ್ತಿಸಿ ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಪಾಲಿಕೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.







