ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ, ಜ.17: ಸರ್ಕಾರಿ ಕಚೇರಿಗಳಲ್ಲಿ ಕಡತಗಳ ತ್ವರಿತ ವಿಲೇವಾರಿಯಲ್ಲಿ ತಂತ್ರಜ್ಞಾನವನ್ನು ಸಮರ್ಪಕ ಬಳಕೆ ಮಾಡಿಕೊಂಡ ಪರಿಣಾಮ ಇ-ಆಫೀಸ್‌ಬಳಕೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2025ನೇ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2,938 ಇ-ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತ 13,664 ಪತ್ರಗಳನ್ನು ಇ-ರಸೀದಿಯಡಿ ಸೃಷ್ಟಿಸಿ 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ ಎಂದರು.
ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಬೇಕು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಲೆಂದು ಇ-ಆಫೀಸ್ ಅನುಷ್ಠಾನದ ಮೂಲಕ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಲ್ಲಿಯೇ ಕಡತ ವಿಲೇವಾರಿ ಮಾಡಲು ನೀಡಿದ ಹೊಣೆಗಾರಿಕೆ ಫಲ ಇದಾಗಿದೆ ಎಂದರು.
ಟಾಪ್ 10ನಲ್ಲಿ ಕಲ್ಯಾಣದ ನಾಲ್ಕು ಜಿಲ್ಲೆ :
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇ-ಕಡತ ಬಳಕೆಯಲ್ಲಿ ಟಾಪ್-10 ಜಿಲ್ಲೆಗಳಲ್ಲಿ ಡಿ ಕಲಬುರಗಿ ಮೊದಲನೇ ಸ್ಥಾನದಲ್ಲಿದೆ. 2,339 ಇ-ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ-ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ-ಕಡತ ಸೃಷ್ಟಿಸುವುದರೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಇದೆ. ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಇದು ಹಿಡಿದ ಕನ್ನಡಿಯಾಗಿದೆ. ಸುಗಮ ಅಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗಮನ ಸೆಳೆದ ಆಳಂದ-ಅಫಜಲಪೂರ ತಾಲೂಕು ಪಂಚಾಯತ್ :
ತಾಲೂಕು ಪಂಚಾಯತ್‌ವಾರು ಇ-ಆಫೀಸ್ ಬಳಕೆಯಲ್ಲಿಯೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಂಚಾಯತ್ 1,508 ಇ-ಕಡತ ಸೃಜಿಸಿ 3,089 ಇ-ಕಡತ ವಿಲೇವಾರಿ ಮಾಡಿ ಅಗ್ರ ಸ್ಥಾನ ಪಡೆದುಕೊಂಡರೆ, ಜಿಲ್ಲೆಯ ಆಳಂದ ತಾಲೂಕು ಪಂಚಾಯತ್ 1,127 ಇ-ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ-ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಅದೇ ರೀತಿ ಅಫಜಲಪುರ ತಾಲೂಕು ಪಂಚಾಯತ್ 668 ಇ-ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾಲೂಕು ಪಂಚಾಯತ್ 564 ಇ-ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಭತ್ತನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ತಾಲೂಕಾವಾರು ಟಾಪ್ ಟೆನ್ ನಲ್ಲಿ ಕಲಬುರಗಿ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.







