ಕಲಬುರಗಿ | ಮನರೇಗಾ ಹೆಸರು ಬದಲಿಸಿದ್ದಕ್ಕೆ ಎಡಪಕ್ಷಗಳಿಂದ ಪ್ರತಿಭಟನೆ

ಕಲಬುರಗಿ, ಡಿ.22: ಕೇಂದ್ರ ಸರ್ಕಾರ ಎಂನರೇಗಾ ಹೆಸರನ್ನು ಬದಲಿಸಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ ಗ್ರಾಮೀಣ ಕಾಯ್ದೆ ಜಾರಿಮಾಡುತ್ತಿರುವುದನ್ನು ಖಂಡಿಸಿ ಎಡಪಕ್ಷಗಳ ಮುಖಂಡರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನಗರದ ತಿಮ್ಮಾಪುರಿ ಸರ್ಕಲ್ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ, ಮತ್ತು ಸೋಷಿಯಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ(ಸಿ) ಒಕ್ಕೂಟದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಯೋಜನೆಯ ಹೆಸರನ್ನು ವಿಬಿಜಿ ರಾಮಜಿ ಎಂದು ಬದಲಾಯಿಸಿರುವುದು ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ ಅಪಮಾನ. ಗಾಂಧೀಜಿಯವರನ್ನು ಕೊಂದು ವಿಜೃಂಭಿಸಿದ ಗೋಡ್ಸೆ ಪರಿವಾರ ಈಗ ಗಾಂಧೀಜಿ ಅವರನ್ನು ಮತ್ತೆ ಮತ್ತೆ ಕೊಲ್ಲುತ್ತಿದೆ ಎಂದು ಹೇಳಿದರು.
ವಿ.ಜಿ.ದೇಸಾಯಿ ಮಾತನಾಡಿ, ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವುದೇ ನೂತನ ಕಾಯ್ದೆಯ ಉದ್ದೇಶವಾಗಿದೆ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಂತ್ರಣ ಮಾಡುವುದನ್ನು ಸಂಪೂರ್ಣ ಕೇಂದ್ರ ಸರ್ಕಾರದ ಹಿಡಿತದಲ್ಲಿಡಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪ್ರಭುದೇವ್ ಯಳಸಂಗಿ, ಎಸ್.ಎಂ.ಶರ್ಮಾ, ಮಹೇಶ್ ನಾಡಗೌಡ, ಮಹೇಶ್ ಎಸ್.ಬಿ., ಶಿವರಾಜ್ ಗಂಗಾಣಿ, ಈಶ್ವರ್, ವಿಶಾಲಾಕ್ಷಿ ಪಾಟೀಲ್, ವರುಣ್ ದೇಸಾಯಿ, ಸಂತೋಷ್ ಕುಮಾರ್ ಹಿರವೇ, ಶ್ರೀಮಂತ ಬಿರಾದಾರ್, ಸುಧಾಮ್ ಧನ್ನಿ, ಮೀನಾಕ್ಷಿ ಬಾಳಿ, ಲವಿತ್ರ ವಸ್ತ್ರದ್, ಭೀಮಾಶಂಕರ್ ಮಾಡಿಯಾಳ, ಮೌಲಾ ಮುಲ್ಲಾ, ಸೂರ್ಯಕಾಂತ ಸೊನ್ನದ್, ಪದ್ಮಾವತಿ ಮಾಲಿಪಾಟೀಲ್, ಮತ್ತಿತರರು ಇದ್ದರು.







