ಕಲಬುರಗಿ | ಸಾರ್ವಭೌಮ ತತ್ವ ಎತ್ತಿಹಿಡಿಯಲು ಕಾನೂನು ಸುಧಾರಣೆ ಅತ್ಯಗತ್ಯ : ನ್ಯಾ.ಸತ್ಯನಾರಾಯಣಾಚಾರ್ಯ

ಕಲಬುರಗಿ: "ವಸಾಹತುಶಾಹಿ ಆಳ್ವಿಕೆಯಲ್ಲಿ ಹಳೆಯ ಕಾನೂನುಗಳನ್ನು ಹೇರಲಾಗಿತ್ತು, ಕಳೆದ 74 ವರ್ಷಗಳಿಂದ ನಾವು ಅವುಗಳನ್ನು ಪರಿಷ್ಕರಿಸುವ ಅಥವಾ ತೆಗೆದುಹಾಕುವ ಬಗ್ಗೆ ಯೋಚಿಸಿರಲಿಲ್ಲ. ಈಗ ನಾವು ಆ ಹಳೆಯ ವಸಾಹತುಶಾಹಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಣಾಯಕ ಹೆಜ್ಜೆ ಇಟ್ಟಿದ್ದೇವೆ" ಎಂದು ನಿವೃತ್ತ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ (ಸಿಯುಕೆ)ದಲ್ಲಿ ಕಾನೂನು ವಿಭಾಗವು ಆಯೋಜಿಸಿದ್ದ ಬೆಂಗಳೂರಿನ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆ ಮತ್ತು ಭಾರತ ಸರ್ಕಾರದ ಗೃಹ ಸಚಿವಾಲಯದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ಡಿ) ಸಹಯೋಗದೊಂದಿಗೆ "ಒಂದು ದಿನ, ಒಂದು ವಿಶ್ವವಿದ್ಯಾಲಯ" ಅಭಿಯಾನದ ಅಡಿಯಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಈ ಹೊಸ ಕ್ರಿಮಿನಲ್ ಕಾನೂನುಗಳ ಅಗತ್ಯವನ್ನು ಚರ್ಚಿಸುತ್ತ "ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಮೂಲಭೂತವಾಗಿ, ಭಾರತದ ಸಂವಿಧಾನದ ಪೀಠಿಕೆಯಲ್ಲಿ ಖಾತರಿಪಡಿಸಿದಂತೆ ಜನರ ಸ್ವಾತಂತ್ರ್ಯಗಳು ಮತ್ತು ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಕಾನೂನು ಸುಧಾರಣೆ ಅತ್ಯಗತ್ಯ" ಎಂದು ಅವರು ಹೇಳಿದರು.
ಸಿಯುಕೆಯ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಕಾನೂನು ನಿಕಾಯದ ಡೀನ್ ಡಾ.ಬಸವರಾಜ ಎಂ.ಕುಬಕಡ್ಡಿ ಮಾತನಾಡಿದರು.
ಡಾ. ಅನಂತ್ ಡಿ. ಚಿಂಚುರೆ ವಂದಿಸಿದರೆ ಕಾನೂನು ವಿದ್ಯಾರ್ಥಿನಿ ವಿಜಯ ಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಾಸ್ಗಾ ಶಫ್ಕತ್ ತಾಂತ್ರಿಕ ಘೋಷ್ಠಿಯನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಡಾ.ರೇಣುಕಾ ಎಸ್.ಗುಬ್ಬೇವಾಡ, ಡಾ.ಜಯಂತ ಬೋರುವಾ, ಪ್ರೊ.ಪವಿತ್ರಾ ಆಲೂರ್, ಪ್ರೊ.ಚೆನ್ನವೀರ್, ಪ್ರೊ.ವಿಯೇಂದ್ರ ಪಾಂಡೆ, ಡಾ.ರವಿ ಖಣಗಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







