Kalaburagi | ಶ್ಯಾಮ ಪ್ರಸಾದ್ ಮುಖರ್ಜಿ ವಿಚಾರಧಾರೆ ಕುರಿತು ಸಂಶೋಧನೆ ನಡೆಯಲಿ: ರಾಕ ಸುಧಾಕರ್ ರಾವ್

ಕಲಬುರಗಿ : ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನ, ವಿಚಾರಧಾರೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿಶ್ವವಿದ್ಯಾಲಯಗಳಲ್ಲಿ ಪುರಾವೆ ಆಧಾರಿತ ಮತ್ತು ಶೈಕ್ಷಣಿಕ ಸಂಶೋಧನೆಗಳು ನಡೆಯಬೇಕು ಎಂದು ಹೈದರಾಬಾದ್‌ನ ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ. ರಾಕ ಸುಧಾಕರ್ ರಾವ್ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ವತಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ “ವಿಕಸಿತ ಭಾರತಕ್ಕಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನ” ವಿಷಯದ ವಿಶೇಷ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಡಾ. ಮುಖರ್ಜಿ ಅವರು ಶ್ರೇಷ್ಠ ಶಿಕ್ಷಣ ತಜ್ಞ, ಸಮರ್ಥ ಸಂಸದೀಯ ನಾಯಕ ಹಾಗೂ ರಾಷ್ಟ್ರೀಯ ಚಿಂತಕರಾಗಿದ್ದು, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ, ಸಾಂವಿಧಾನಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
33ನೇ ವಯಸ್ಸಿನಲ್ಲೇ ದೇಶದ ಅತ್ಯಂತ ಕಿರಿಯ ಉಪಕುಲಪತಿಗಳಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿಯೂ ಕಾರ್ಯನಿರ್ವಹಿಸಿ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹೋರಾಟ ನಡೆಸಿದ್ದರು ಎಂದು ವಿವರಿಸಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಅವರ ಪಾತ್ರ, ಸ್ಥಳಾಂತರಗೊಂಡ ಸಮುದಾಯಗಳ ಪರ ಕಾಳಜಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತ ದೃಢ ನಿಲುವು ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ನೀಡಿದ ಆದ್ಯತೆ ಗಮನಾರ್ಹವಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ಅವರು ಪ್ರತಿಪಾದಿಸಿದ್ದ “ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ” ಪರಿಕಲ್ಪನೆ ಇಂದಿಗೂ ರಾಷ್ಟ್ರೀಯ ಚರ್ಚೆಗಳಲ್ಲಿ ಮಹತ್ವ ಪಡೆದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ರಾಷ್ಟ್ರೀಯ ನಾಯಕರ ಜೀವನ ಮತ್ತು ಕೊಡುಗೆಗಳ ಕುರಿತು ವಸ್ತುನಿಷ್ಠ ಹಾಗೂ ಮಾಹಿತಿಯುಕ್ತ ಶೈಕ್ಷಣಿಕ ಚರ್ಚೆಗಳನ್ನು ಉತ್ತೇಜಿಸುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಹೇಳಿದರು.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನವು ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿದೆ. ನವೀನ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ರಾಷ್ಟ್ರೀಯ ಸೇವೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಚನ್ನವೀರ್ ಆರ್.ಎಂ. ಸ್ವಾಗತಿಸಿದರು. ಪ್ರೊ. ಬಸವರಾಜ್ ಎಂ. ಕುಬಕಡ್ಡಿ ವಂದಿಸಿದರು. ಡಾ. ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.






