Kalaburagi | ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ರಾಹುಲ್ ಸಂಕನೂರು

ಕಲಬುರಗಿ: ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ತೊಂದರೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್.ಸಂಕನೂರು ಕರೆ ನೀಡಿದರು.
ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಸಮೀಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷ ಮೇ 31ರಂದು ಆಚರಿಸಲಾಗುವ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳು ಯುವಜನರಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಸಿಗರೇಟ್, ಗುಟ್ಕಾ, ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಪ್ಪ ಖ್ಯಾತನಾಳ ಮಾತನಾಡಿ, ಸಿಗರೇಟ್, ಬೀಡಿ ಹಾಗೂ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳು ಜೀವಕ್ಕೆ ಅಪಾಯಕಾರಿಯಾಗಿದ್ದು, ಅವುಗಳಿಂದ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು ಹಾಗೂ ಹೃದಯಾಘಾತದಂತಹ ಮಾರಕ ರೋಗಗಳು ಉಂಟಾಗುತ್ತವೆ ಎಂದು ಎಚ್ಚರಿಸಿದರು.
ಧೂಮಪಾನ ಮಾಡುವವರಷ್ಟೇ ಅಲ್ಲದೆ, ಅವರ ಸುತ್ತಮುತ್ತಲಿರುವ ಧೂಮಪಾನ ಮಾಡದವರ ಆರೋಗ್ಯಕ್ಕೂ ಹೊಗೆ ಹಾನಿಕಾರಕವಾಗಿದೆ. “ಸಿಗರೇಟ್ ಹೊಗೆಯಲ್ಲಿ ಬದುಕನ್ನು ಸುಡಬೇಡಿ; ಕ್ಯಾನ್ಸರ್ ತರುವ ತಂಬಾಕು ಬೇಡ, ಆರೋಗ್ಯ ನೀಡುವ ಸ್ವಚ್ಛ ಗಾಳಿ ಬೇಕು. ತಂಬಾಕು ಮುಕ್ತ ಸಮಾಜ ನಮ್ಮೆಲ್ಲರ ಸಂಕಲ್ಪವಾಗಬೇಕು” ಎಂದು ಹೇಳಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ರಾಕೇಶ್ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ತಂಬಾಕು ನಿಯಂತ್ರಣ ಕಾರ್ಯಕ್ರಮಗಳ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ರುಕಿಯಾ ಆಸ್ನಾ ರಬಾ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಮಾರುತಿ ಕಾಂಬಳೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಜಾತಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಆರತಿ ಧನಶ್ರೀ, ಜಿಲ್ಲಾ ತಂಬಾಕು ವ್ಯಸನ ಮುಕ್ತ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಬಿಎಚ್‌ಇಒ ಶಶಿಧರ್, ಡಿಇಒ ರವಿಕುಮಾರ್ ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.






