ಕಲಬುರಗಿ | ಎಸ್ಕ್ರೋ ಖಾತೆಗೆ ಗ್ರಂಥಾಲಯ ಕರ ನೇರ ಜಮಾ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್

ಕಲಬುರಗಿ: ಪಾವತಿಯಾಗದೆ ಬಾಕಿ ಉಳಿದಿರುವ ಗ್ರಂಥಾಲಯ ಕರವನ್ನು ತಕ್ಷಣ ಪಾವತಿಸಬೇಕು. ಇನ್ನು ಮುಂದೆ ಎಲ್ಲಾ ಸ್ಥಳೀಯ ಸಂಸ್ಥೆಗಳು ತಮ್ಮ ಜನರಲ್ ಖಾತೆಗೆ ಜಮಾ ಮಾಡುವ ಬದಲು ಗ್ರಂಥಾಲಯ ಇಲಾಖೆಯ ಎಸ್ಕ್ರೋ ಖಾತೆಗೆ ಶೇ.6ರಷ್ಟು ಗ್ರಂಥಾಲಯ ಕರವನ್ನು ನೇರವಾಗಿ ಜಮಾ ಮಾಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ 79ನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ 78ನೇ ಸಭೆಯ ನಡಾವಳಿಯನ್ನು ಓದಿ ಅನುಮೋದಿಸಲಾಯಿತು. 2025-26ನೇ ಸಾಲಿನಲ್ಲಿ ಯಡ್ರಾಮಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳಿಂದ ಗ್ರಂಥಾಲಯ ಕರ ಪಾವತಿಯಾಗಿರುವ ಕುರಿತು ಸಭೆಗೆ ಮಾಹಿತಿ ನೀಡಲಾಯಿತು. ಯಡ್ರಾಮಿ ತಾಲೂಕಿನಿಂದ ಬಾಕಿ ಉಳಿದಿರುವ ಕರವನ್ನು ಕೂಡಲೇ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಮಲಾಪುರದಲ್ಲಿ ಒತ್ತುವರಿಯಾಗಿರುವ ಗ್ರಂಥಾಲಯದ ಜಾಗವನ್ನು ಸೆ.15ರೊಳಗಾಗಿ ಹಾಗೂ ಶಹಾಬಾದ್‌ನಲ್ಲಿರುವ ಒತ್ತುವರಿ ಜಾಗವನ್ನು 15 ದಿನಗಳೊಳಗಾಗಿ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. ಯಡ್ರಾಮಿ ತಾಲೂಕಿನಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ತಾಲೂಕಿನ ಮಧ್ಯಭಾಗದಲ್ಲಿ ಸಿ.ಎ. ನಿವೇಶನ ಒದಗಿಸುವಂತೆ ನಿರ್ದೇಶನ ನೀಡಲಾಯಿತು.
ಬಿದ್ದಾಪುರ ಬಡಾವಣೆಯಲ್ಲಿ ಕೆಕೆಆರ್‌ಡಿಬಿ ಹಾಗೂ ಪಿಡಬ್ಲ್ಯೂಡಿ ವತಿಯಿಂದ ಸುಮಾರು ರೂ.25 ಕೋಟಿ ವೆಚ್ಚದಲ್ಲಿ ನೂತನ ಸ್ವಂತ ಗ್ರಂಥಾಲಯ ಕಟ್ಟಡ ನಿರ್ಮಿಸುವ ಯೋಜನೆ ಕುರಿತು ಅಗತ್ಯ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
2025-26ನೇ ಸಾಲಿನಲ್ಲಿ ಒಟ್ಟು ರೂ.84 ಲಕ್ಷ ಗ್ರಂಥಾಲಯ ಕರ ಜಮೆಯಾಗಿದ್ದು, ಇದರಲ್ಲಿ ಸಾಮಾನ್ಯ ವೆಚ್ಚಕ್ಕೆ ರೂ.11.69 ಲಕ್ಷ ಹಾಗೂ ಪುಸ್ತಕ ಖರೀದಿಗೆ ಕಾಲಾವಕಾಶ ವಿಸ್ತರಣೆಯಾಗಿದ್ದರಿಂದ ರೂ.39 ಲಕ್ಷ ಸೇರಿದಂತೆ ಒಟ್ಟು ರೂ.50.74 ಲಕ್ಷ ವಾಸ್ತವಿಕ ವೆಚ್ಚವಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಉಳಿಕೆ ಗ್ರಂಥಾಲಯ ಕರದ ಅನುದಾನದಲ್ಲಿ ಬಾಡಿಗೆ ಅಥವಾ ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಗ್ರಂಥಾಲಯಗಳು ಹಾಗೂ ಪಟ್ಟಣ ಪಂಚಾಯಿತಿ ಗ್ರಂಥಾಲಯಗಳಿಗೆ ರೂ.10ರಿಂದ 15 ಲಕ್ಷದವರೆಗೆ ಅನುದಾನ ನೀಡಿ ಅಂತರ್ಜಾಲ ಸೌಲಭ್ಯ, ಪೀಠೋಪಕರಣ ಹಾಗೂ ದಿನಪತ್ರಿಕೆ ರ್ಯಾಕ್‌ಗಳನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾಳಾದ ಹಾಗೂ ಬಳಕೆಗೆ ಯೋಗ್ಯವಲ್ಲದ ಪುಸ್ತಕಗಳನ್ನು ಕೆಪಿಟಿಟಿ ನಿಯಮಗಳಂತೆ ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು, ಚಿಂಚೋಳಿ ಸೇರಿದಂತೆ ಅಗತ್ಯವಿರುವ ಇತರೆ ಗ್ರಂಥಾಲಯಗಳಲ್ಲಿ ಸಾದಿಲ್ವಾರು ವೆಚ್ಚದಲ್ಲಿ ಶುಚಿಗಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಯಿತು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ವಿಶೇಷ ಹಾಗೂ ಆಕರ್ಷಕ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಡಾ. ಪರಮೇಶ್ವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನ್ನಾವರ ದೌಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ, ಶಹಾಬಾದ್ ನಗರಸಭೆ ಆಯುಕ್ತೆ ನೀಲಪ್ರಭ, ಜಿಲ್ಲೆಯ ವಿವಿಧ ತಾಲೂಕುಗಳ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿಗಳಾದ ಗೌತಮ ಕಡೂನ, ಅಶ್ವಿನಿ ಮುರಾಳ, ಅನಿಲಕುಮಾರ ಬಿರಾದಾರ, ರಾಜಶ್ರೀ ಎಸ್. ಹಾಗೂ ಸಂಗಪ್ಪ ಪಾಸೋಡಿ ಉಪಸ್ಥಿತರಿದ್ದರು.






