Kalaburagi | ಕವಿತೆ ರಚನೆಗೆ ಜೀವನಾನುಭವ, ಕಲಾಕೌಶಲ್ಯ ಅಗತ್ಯ: ಡಾ.ಸೂರ್ಯಕಾಂತ ಸುಜ್ಯಾತ

ಕಲಬುರಗಿ: ಕವಿತೆ ರಚಿಸಲು ಸಣ್ಣಪುಟ್ಟ ವಸ್ತುಗಳು, ವಿಷಯಗಳು ಹಾಗೂ ದೈನಂದಿನ ಬದುಕಿನ ಘಟನೆಗಳು ಕವಿಗೆ ಪ್ರೇರಣೆಯಾಗುತ್ತವೆ. ಅವುಗಳನ್ನು ಅರ್ಥಪೂರ್ಣ ಕಾವ್ಯವಾಗಿ ರೂಪಿಸಲು ಪ್ರತಿಭೆ, ಜೀವನಾನುಭವ ಹಾಗೂ ಕಲಾಕೌಶಲ್ಯ ಅಗತ್ಯ ಎಂದು ಹಿರಿಯ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ ಅಭಿಪ್ರಾಯಪಟ್ಟರು.
ಕಲಬುರಗಿಯಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಕವಿ ಡಾ. ಎಸ್.ಎಸ್. ಗುಬ್ಬಿ ಅವರ ‘ಆತ್ಮನಿನಾದ’ ಕವನ ಸಂಕಲನದ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆತ್ಮನಿನಾದ’ ಕೃತಿಯ ಕವಿತೆಗಳು ಪರಿಸರ ಪ್ರೇಮ, ವರ್ತಮಾನದ ತಲ್ಲಣಗಳು ಹಾಗೂ ಆಧ್ಯಾತ್ಮಿಕ ಅನುಭವಗಳನ್ನು ಓದುಗರಿಗೆ ಪರಿಚಯಿಸುತ್ತವೆ. ಕವಿಯ ಸೂಕ್ಷ್ಮ ಸಂವೇದನೆಗಳು ಮತ್ತು ಜೀವನಾನುಭವಗಳು ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿದ್ದು, ಬದುಕಿನ ವಿವಿಧ ಆಯಾಮಗಳನ್ನು ತೆರೆದಿಡುತ್ತವೆ ಎಂದು ಅವರು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮಾತನಾಡಿದರು. ಕವಿ ಡಾ. ಎಸ್.ಎಸ್. ಗುಬ್ಬಿ ತಮ್ಮ ಸಾಹಿತ್ಯಿಕ ಪಯಣ ಹಾಗೂ ಕವನ ರಚನೆಯ ಅನುಭವಗಳನ್ನು ಹಂಚಿಕೊಂಡರು. ಡಾ. ಮಲ್ಲಿನಾಥ ತಳವಾರ ಮತ್ತು ಶಿವಯ್ಯ ಮಠಪತಿ ಅವರು ‘ಆತ್ಮನಿನಾದ’ ಕವನ ಸಂಕಲನದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿಗಳಾದ ಸಿ.ಎಸ್. ಮಾಲಿಪಾಟೀಲ್, ವಿಶ್ವನಾಥ ಭಕರೆ, ಡಾ. ಸುರೇಶ ಜಾದವ್, ಡಾ. ಸಿದ್ದರಾಮಯ್ಯ ಮಠ, ರೇವಣಸಿದ್ದಪ್ಪ ದುಕಾನ, ಎಸ್.ಎಸ್. ಪಾಟೀಲ್, ಎಸ್.ವಿ. ಹತ್ತಿ, ಗಂಗಾಧರ ಪಾಟೀಲ್ ಹಾಗೂ ಶಿವಾನಂದ ಮಠಪತಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.






