ಕಲಬುರಗಿ | ಪಿಡಿಒಗೆ ಜೀವ ಬೆದರಿಕೆ: ಆರೋಪಿಯ ಬಂಧನಕ್ಕೆ ರಾಜೇಶ್ವರಿ ಸಾಹು ಆಗ್ರಹ

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಮಮದಾಪುರ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಆಗ್ರಹಿಸಿದ್ದಾರೆ.
ಈ ಕುರಿತು ಅವರು ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಿಂಗಣ್ಣ ಎಂಬ ವ್ಯಕ್ತಿ ಮಹಿಳಾ ಅಧಿಕಾರಿ ಇಮ್ತಾಜ್ ಮಮದಾಪುರ ಅವರಿಗೆ ಅಸಭ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರೌಡಿಶೀಟ್ ತೆರೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಮೇಲಿನ ಹಲ್ಲೆ ಹಾಗೂ ಅಸಹಜ ಸಾವುಗಳ ಕುರಿತು ರಚಿಸಲಾದ ಮೀನಾಕ್ಷಿ ಸುಂದರಂ ಅಧ್ಯಯನ ಸಮಿತಿಯ ವರದಿ ಪಡೆದು ನೌಕರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ ಬಡ್ತಿ, ವೇತನ ತಾರತಮ್ಯ ಹಾಗೂ ಹುದ್ದೆ ಉನ್ನತೀಕರಣ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳನ್ನು ಗ್ರೂಪ್-ಬಿ ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.





