Kalaburagi | ಯುವಕರ ರಾಜಕೀಯ ಬೆಳವಣಿಗೆಗೆ ಲಿಂಗರಾಜ ಶಾಸ್ತ್ರಿ ಬೆನ್ನೆಲುಬಾಗಿದ್ದರು : ಪ್ರವೀಣ ಪಾಟೀಲ ಹರವಾಳ

ಕಲಬುರಗಿ: “ನನ್ನಂತಹ ಹಲವಾರು ಯುವಕರಲ್ಲಿ ರಾಜಕೀಯದ ಬಗ್ಗೆ ಆಸಕ್ತಿ ಮೂಡಿಸಿ, ರಾಜಕಾರಣದ ಒಳಹೊರಗನ್ನು ಪರಿಚಯಿಸಿ, ಎನ್‌ಎಸ್‌ಯುಐ ಮೂಲಕ ಅನೇಕ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದು, ಅವರ ರಾಜಕೀಯ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಂತವರು ದಿವಂಗತ ಡಾ. ಲಿಂಗರಾಜ ಶಾಸ್ತ್ರಿ” ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾ ಭವನದಲ್ಲಿ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್, ಬೆಂಗಳೂರು ವತಿಯಿಂದ ಆಯೋಜಿಸಿದ್ದ ದಿವಂಗತ ಡಾ. ಲಿಂಗರಾಜ ಶಾಸ್ತ್ರಿ ಅವರ 5ನೇ ಪುಣ್ಯಸ್ಮರಣೆ ಹಾಗೂ ಪರೋಪಕಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರೋಪಕಾರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಡಾ. ಲಿಂಗರಾಜ ಶಾಸ್ತ್ರಿಯವರು ಯುವಕರನ್ನು ಪ್ರೋತ್ಸಾಹಿಸುವುದರೊಂದಿಗೆ ಅವರ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ಆದರ್ಶ, ಸೇವಾ ಮನೋಭಾವ ಮತ್ತು ನಾಯಕತ್ವ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡ ಅಮರನಾಥ ತಡಕಲ್ ಅವರಿಗೆ ಪರೋಪಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಾಳಾ ಡಾ. ಗುರುಮೂರ್ತಿ ಶಿವಾಚಾರ್ಯರು, ದಿವಂಗತ ಡಾ. ಲಿಂಗರಾಜ ಶಾಸ್ತ್ರಿಯವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕಿರಣ ದೇಶಮುಖ ಉದ್ಘಾಟಿಸಿದರು. ಅಶೋಕ ಗುರೂಜಿ, ಸುನೀತಾ ರಾಠೋಡ್, ಜ್ಯೋತಿ ಪಾಟೀಲ ಜೈನಾಪುರ ಹಾಗೂ ಹುಚ್ಚೇಶ್ವರ ವಠಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಸದಸ್ಯತ್ವ ಅಭಿಯಾನದ ಪ್ರಮುಖರಾದ ಎಂ.ಎಸ್. ಪಾಟೀಲ ನರಿಬೋಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷೆ ಸುಮಾ ಕವಲ್ದಾರ ಕಾರ್ಯಕ್ರಮ ನಿರೂಪಿಸಿದರು.
ಶಾಂತಪ್ಪ ನಿಂಬಾಳ, ಮಹೇಶ ರಂಗದಾಳ, ಮಹಾದೇವಿ ಹೇಳವರ್, ಶಾರದಾ ನೂರಜಾ ಬಡೆಗರ್, ಪರ್ವಿನ್ ಇಂದ್ರಾರೆಡ್ಡಿ, ಶಮೀನಾ ಬೇಗಂ, ಬಂಗಾರೆಪ್ಪ ಆಡಿನ, ಲಕ್ಷ್ಮೀಕಾಂತ ಸ್ವಾದಿ, ಮಹೇಶ ಕೆಂಬಾವಿ, ವಿರಣ್ಣ ಬೆಲೂರೆ, ಅಣವಿರಗೌಡ, ಗೌರಿಶಂಕರ ಶಾಸ್ತ್ರಿ, ರಾಜಶೇಖರ ಶಾಸ್ತ್ರಿ ಸೇರಿದಂತೆ ದಿ. ಡಾ. ಲಿಂಗರಾಜ ಶಾಸ್ತ್ರಿ ಅವರ ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.






