Kalaburagi | ಆ.16ರೊಳಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಸಲ್ಲಿಕೆ: ವಿಶ್ವಜಿತ್ ಕದಮ್

ಕಲಬುರಗಿ : ಕಲಬುರಗಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಅಂಗವಾಗಿ ಪಕ್ಷದ ಶಾಸಕರು, ಸಚಿವರು, ಹಿರಿಯ ಮುಖಂಡರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಅಧ್ಯಕ್ಷ ಸ್ಥಾನಕ್ಕೆ ಅರ್ಹವಾಗಿರುವ ಆರು ಆಕಾಂಕ್ಷಿಗಳ ಹೆಸರನ್ನು ಆ.16ರೊಳಗೆ ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದು ಎಐಸಿಸಿ ವೀಕ್ಷಕ ಡಾ. ವಿಶ್ವಜಿತ್ ಕದಮ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ದಲಿತ, ಯುವ, ಮಹಿಳಾ ಹಾಗೂ ಹಿರಿಯ ಮುಖಂಡರ ಹೆಸರುಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲರ ಅಭಿಪ್ರಾಯಕ್ಕೂ ಸಮಾನ ಮಹತ್ವ ನೀಡಲಾಗುವುದು. ಪಕ್ಷದ ಸಂಘಟನೆಗೆ ಬದ್ಧರಾಗಿ, ತಳಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಜವಾಬ್ದಾರಿಯುತ ನಾಯಕನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಕ್ಷೇತ್ರಗಳ ನಾಯಕರು, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಬಳಿಕ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಆರು ಹೆಸರುಗಳ ಪಟ್ಟಿಯನ್ನು ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುವುದು ಎಂದು ಡಾ. ವಿಶ್ವಜಿತ್ ಕದಮ್ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಕಾಳಗಿ, ಅಕ್ಕಮಹಾದೇವಿ ಪಾಟೀಲ್, ಅರವಿಂದ ಅರಳಿ ಸೇರಿದಂತೆ ಹಲವರು ಇದ್ದರು.






