Kalaburagi | ಸ್ವಾತಂತ್ರ್ಯ ಹೋರಾಟಗಾರರ ಬದುಕು, ಕೃತಿಗಳು ಮಕ್ಕಳಿಗೆ ಪ್ರೇರಣೆ: ಯಶೋಧಾ ಕಟಕೆ

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಸಾಧನೆಗಳು ಮಕ್ಕಳಿಗೆ ಪ್ರೇರಣೆಯಾಗುವುದರ ಜೊತೆಗೆ, ಅಂತಹ ಮಹಾನ್ ವ್ಯಕ್ತಿಗಳು ರಚಿಸಿದ ಕೃತಿಗಳು ದೇಶಪ್ರೇಮ, ಪ್ರೀತಿ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತವೆ ಎಂದು ನಗರದ ರಾಘವೇಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಯಶೋಧಾ ಕಟಕೆ ಹೇಳಿದರು.
ನಗರದ ಸೈಯದ್ ಚಿಂಚೋಳಿಯ ಚಂದ್ರಶೇಖರ್ ಪಾಟೀಲ್ ರೇವೂರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಶನಿವಾರ (ಅ. 24) ಆಯೋಜಿಸಿದ್ದ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿವಂಗತ ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ ‘ಅಯ್ಯನ ಕಥೆಗಳು’ ಕೃತಿಯನ್ನು ಶಾಲೆಗಳಿಗೆ ಹಸ್ತಾಂತರಿಸುವ ಅಭಿಯಾನದ ನಾಲ್ಕನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿದ್ದು, ದೇಶದ ಸಂಪತ್ತಾಗಿದ್ದಾರೆ. ರಾಷ್ಟ್ರಭಕ್ತ ಮಕ್ಕಳ ನಿರ್ಮಾಣಕ್ಕೆ ಉತ್ತಮ ಪುಸ್ತಕಗಳ ಓದು ಅಗತ್ಯ. ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು, ಹೆತ್ತ ತಂದೆ-ತಾಯಿ ಹಾಗೂ ರೈತರು ಮಕ್ಕಳಿಗೆ ಆದರ್ಶಪ್ರಾಯರಾಗಬೇಕು. ತ್ರಿವರ್ಣ ಧ್ವಜ ಹಾರಾಡುವ ಹಿಂದೆ ಸೈನಿಕರ ತ್ಯಾಗಮಯ ಬದುಕಿದೆ. ಮಕ್ಕಳು ಸ್ವತಂತ್ರವಾಗಿ ಬದುಕಲು ಹೆತ್ತವರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಅವರು ರಚಿಸಿದ ಕೃತಿಗಳು ಮಕ್ಕಳ ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಪುಸ್ತಕ ಜ್ಞಾನ ವಿಸ್ತರಣೆಗೆ ಮೂಲ :
ಪುಸ್ತಕಗಳ ಓದು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಖ್ಯಾತ ಕಥೆಗಾರ್ತಿ ಹಾಗೂ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮನೆಗಳಲ್ಲಿ ಅಜ್ಜ-ಅಜ್ಜಿಯರಿಂದ ಕಥೆಗಳನ್ನು ಕೇಳುವುದು ಹಾಗೂ ಪುಸ್ತಕಗಳನ್ನು ಓದುವುದರಿಂದ ಮಕ್ಕಳ ಕಲ್ಪನಾಶಕ್ತಿ ವಿಸ್ತರಿಸುತ್ತದೆ ಮತ್ತು ಸಾಧನೆ ಮಾಡಲು ಪ್ರೋತ್ಸಾಹ ದೊರೆಯುತ್ತದೆ ಎಂದರು.
ಪುಸ್ತಕಗಳ ಬಗ್ಗೆ ಪ್ರೀತಿ ಮತ್ತು ಗೌರವ ಬೆಳೆಸಿಕೊಂಡಾಗ ಅವು ಜ್ಞಾನವನ್ನು ಹೆಚ್ಚಿಸುತ್ತವೆ. ಸಾಧನೆ ಮಾಡಲು ವ್ಯಕ್ತಿತ್ವಕ್ಕೆ ಪ್ರೇರಣೆ ನೀಡುತ್ತವೆ. ‘ಅಯ್ಯನ ಕಥೆಗಳು’ ಕೃತಿಯು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಹಾಸ್ಯ, ಪರಿಸರ, ಪ್ರಾಣಿ, ದೆವ್ವ ಹಾಗೂ ನೀತಿಬೋಧಕ ಕಥೆಗಳನ್ನು ಒಳಗೊಂಡಿದೆ. ಮಕ್ಕಳು ಈ ಕಥೆಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕು ಎಂದು ಕಥೆಗಳ ಮೂಲಕ ತಿಳಿಹೇಳಿದರು.
ಶಾಲೆಯ ಅಧ್ಯಕ್ಷೆ ಸುನಿತಾ ಅನಿಲ್ ಕುಮಾರ್ ಡಾಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿರ್ದೇಶಕ ಅನಿಲ್ ಕುಮಾರ್ ಡಾಂಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ರಚಿಸಿದ ಕೃತಿಗಳನ್ನು ಮಕ್ಕಳ ಕೈಗೆ ತಲುಪಿಸುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದ ಶಾಲೆಗಳ ಜೊತೆಗೆ ಗ್ರಾಮೀಣ ಪ್ರದೇಶದ ಶಾಲೆಗಳಿಗೂ ಈ ಕೃತಿಗಳನ್ನು ಹಸ್ತಾಂತರಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈ ವರ್ಷ ಹೋಮಿಯೋಪತಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದ ರುಚಿತಾ ಡಾಂಗೆ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಮುಖ್ಯಗುರು ಸುನಿತಾ ಪೂಜಾರಿ, ಟ್ರಸ್ಟಿ ಮಹೇಶ್ ಕಡೇಚೂರ್, ಶಿಕ್ಷಕರಾದ ಜಗದೇವಿ, ಉಮಾದೇವಿ, ಪ್ರಿಯಾಂಕಾ, ಚೆನ್ನಮ್ಮ, ಶಿವಲೀಲಾ ಹಾಗೂ ಐಶ್ವರ್ಯ ಉಪಸ್ಥಿತರಿದ್ದರು. ಶಾಲೆಯ ಆಡಳಿತಾಧಿಕಾರಿ ಸುಚೇತ್ ಡಾಂಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.
ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆ :
ಮಕ್ಕಳಲ್ಲಿ ಕಥೆ ಹಾಗೂ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಲು ಶಾಲೆಯಲ್ಲಿ ಪ್ರತಿ ಶನಿವಾರ ‘ಅಯ್ಯನ ಕಥೆಗಳು’ ಕೃತಿಯ ಕಥೆಗಳು ಸೇರಿದಂತೆ ಇತರ ಪುಸ್ತಕಗಳ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗುವುದು. ಉತ್ತಮವಾಗಿ ಕಥೆ ಪ್ರಸ್ತುತಪಡಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸುವ ಸಂಪ್ರದಾಯವನ್ನು ಆರಂಭಿಸಲಾಗುವುದು ಎಂದು ಶಾಲೆಯ ಆಡಳಿತಾಧಿಕಾರಿ ಸುಚೇತ್ ಡಾಂಗೆ ತಿಳಿಸಿದರು.






