ಕಲಬುರಗಿ | 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆಯ ಸಹಾಯಕ

ಶರಣಪ್ಪ
ಕಲಬುರಗಿ : ಸಿ.ಸಿ ರೋಡ್ ಕಾಮಗಾರಿ ಮಾಡಿರುವುದರ ಅನುಮತಿ ಪತ್ರ ಕೊಡುವುದಕ್ಕಾಗಿ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ದ್ವಿತೀಯ ದರ್ಜೆ ಸಹಾಯಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಕಾಳಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ದ್ವಿತೀಯ ದರ್ಜೆ ಸಹಾಯಕ ಶರಣಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಸಿಬ್ಬಂದಿ ಎಂದು ತಿಳಿದುಬಂದಿದೆ.
ಶರಣಪ್ಪ ಅವರು, ಸಿಸಿ ರೋಡ್ ಕಾಮಗಾರಿ ಅನುಮತಿ ಪತ್ರ ಕೊಡುವುದಕ್ಕಾಗಿ ಗುತ್ತಿಗೆದಾರ ಅಣವೀರಯ್ಯ ಅವರ ಬಳಿ 1 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮಾಹಿತಿಯನ್ನು ಅಣವೀರಯ್ಯ ಅವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್.ಡಿ.ಎ ಸಿಬ್ಬಂದಿ ಶರಣಪ್ಪ ಲಂಚ ಪಡೆಯುತ್ತಿದ್ದ ವೇಳೆಯೇ ಲೋಕಾಯುಕ್ತ ಪೊಲೀಸರ ಎದುರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ್, ಸಿಬ್ಬಂದಿಗಳಾದ ಬಸವರಾಜ್ ಎಂ.ಜಿ.ರಾಣುಜಿ, ಪ್ರದೀಪ್, ಫೈಮೋದಿನ್, ಸಂತೋಷಮ್ಮ, ಮಲ್ಲಿನಾಥ್, ಮಲ್ಲಿಕಾರ್ಜುನ್ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿತ್ತು.





