ಕಲಬುರಗಿ| ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾ ಪಂಚಾಯಿತಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಇಲ್ಲಿನ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ 15ಕ್ಕೂ ಹೆಚ್ಚು ತಂಡಗಳು ಸೋಮವಾರ ದಾಳಿ ನಡೆಸಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿವೆ.
ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ ಅವರ ನೇತೃತ್ವದಲ್ಲಿ ಬೆಳಗ್ಗೆ ನಗರದ ಕಲಬುರಗಿ ಮಹಾನಗರದ ಪಾಲಿಕೆ ಕಚೇರಿಯ ಇ-ಆಸ್ತಿ ವಿಭಾಗ ಹಾಗೂ ಚುನಾವಣಾ ಕಚೇರಿಯ ಕೋಣೆಯಲ್ಲಿ ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು. ಇದೇ ವೇಳೆಯಲ್ಲಿ 2012ರ ಜುಲೈ ತಿಂಗಳ ಗುತ್ತಿಗೆ ದಾಖಲೆ ಪತ್ರಕ್ಕೆ ಈತನಕ ಪಾಲಿಕೆ ಆಯುಕ್ತರ ಸಹಿ ಮಾಡಿಸಿಲ್ಲ?, ಅಲ್ಲಿಂದ ಇಲ್ಲಿಯವರೆಗೂ ಫೈಲ್ ಜೀವಂತವಾಗಿದೆಯಾ? ಎಂದು ಪ್ರಶ್ನೆ ಮಾಡಿದರು.
ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಹಾಕಿದ್ದಾರೆ, ಅವರ ಸೇರ್ಪಡೆ ಆಗಿದೆಯೋ ಇಲ್ಲವೋ ಎಂದು ಸಿಬ್ಬಂದಿಯವರಿಗೆ ಕೇಳಿದ ಅವರು, ಚುನಾವಣಾ ವಿಭಾಗದ ಕಡತ ಬೇರೆ ವಿಭಾಗಕ್ಕೆ ಹೇಗೆ ಬಂತು? ಎಂದು ಪ್ರಶ್ನಿಸಿದರು.
ಪಾಲಿಕೆಯ ಕಚೇರಿಯಲ್ಲಿ ಹೋಗುತ್ತಿದ್ದ ಮಹಿಳೆಯರನ್ನು ಗಮನಿಸಿದ ಅಧಿಕಾರಿಗಳು, ಯಾರಮ್ಮ ನೀವು ಎಂದು ಪ್ರಶ್ನಿಯಾದಾಗ ನಾವು 'ಡಿ'ಗ್ರೂಪ್ ಸಿಬ್ಬಂದಿಯ ಎಂದು ಉತ್ತರಿಸಿದ್ದರು. ಇದೇ ವೇಳೆಯಲ್ಲೇ ಸಮವಸ್ತ್ರ ಯಾಕೆ ಧರಿಸಿಲ್ಲ ಎಂದು ಮಹಿಳೆಯರನ್ನು ಪ್ರಶ್ನಿಸಿದರು.
ಅಲ್ಲದೆ, ಪಾಲಿಕೆಯ ಕಂದಾಯ ಉಪ ಆಯುಕ್ತರ ಕಚೇರಿಗೆ ಹೋದ ಅಧಿಕಾರಿಗಳು, ಸೆಕ್ಷನ್ ಅಧಿಕಾರಿ ಯಾರು? ಸಮವಸ್ತ್ರ ಧರಿಸಿಲ್ಲ ಎಂದು ಯಾಕೆ ಪ್ರಶ್ನೆ ಮಾಡಲ್ಲ ಎಂದು ಕಂದಾಯ ಉಪ ಆಯುಕ್ತ ರಾಜೇಂದ್ರ ಭಾಲ್ಕಿ ಅವರನ್ನು ಪ್ರಶ್ನಿಸಿದರು. ದಿನಾಲೂ ಸಮವಸ್ತ್ರ ಧರಿಸುವುದರ ಬಗ್ಗೆ ಕೇಳಬೇಕು ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತದ ಅಧಿಕಾರಿ, ಪೊಲೀಸರು, ಅಧಿಕಾರಿ, ಸಿಬ್ಬಂದಿಯವರು ಇದರು.







