Kalaburagi | ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷ: ವ್ಯಕ್ತಿಗೆ 5.61 ಲಕ್ಷ ರೂ. ವಂಚನೆ

ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ, ವಿವಿಧ ಟ್ರೇಡಿಂಗ್ ಕಂಪನಿಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಒಟ್ಟು 5,61,105 ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಧನಗರಗಲ್ಲಿಯ ನಿವಾಸಿ, ಖಾಸಗಿ ಹಾಗೂ ಕೃಷಿ ಕೆಲಸ ಮಾಡುತ್ತಿರುವ ಸಿದ್ದಲಿಂಗಪ್ಪ ಮುದ್ದಪ್ಪ ರಾವೂರ (50) ವಂಚನೆಗೊಳಗಾದವರು. ಈ ಕುರಿತು ಅವರು ಶನಿವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ದಲಿಂಗಪ್ಪ ಅವರು 2024ರಿಂದ ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಹಾಗೂ ಟ್ರೇಡಿಂಗ್ ಮಾಡುತ್ತಿದ್ದರು. ಇದನ್ನು ಗಮನಿಸಿದ ವಂಚಕರು FOREX MINT, RUPE STOCKS, AXWEL ಹಾಗೂ VERTEX-24 ಎಂಬ ಟ್ರೇಡಿಂಗ್ ಕಂಪನಿಗಳ ವ್ಯವಸ್ಥಾಪಕರೆಂದು ಪರಿಚಯಿಸಿಕೊಂಡು ವಾಟ್ಸ್‌ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ.
ಮೊದಲಿಗೆ FOREX MINT ಕಂಪನಿಯ ಅಕ್ಷಯ ಠಾಕೋರ್ ಎಂಬಾತ ಪರಿಚಯಿಸಿಕೊಂಡು, ಕಂಪನಿಯ ಆ್ಯಪ್ ಕಳುಹಿಸಿ ಡಿಮ್ಯಾಟ್ ಖಾತೆ ಸೃಷ್ಟಿಸಿದ್ದಾನೆ. ಅದರಲ್ಲಿ ಹೂಡಿಕೆ ಮಾಡುವಂತೆ ಸೂಚಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ 3,51,105 ರೂ. ವರ್ಗಾಯಿಸಿಕೊಂಡಿದ್ದಾನೆ. ನಂತರ RUPE STOCKS ಕಂಪನಿಯ ಅಜಯ್ ಶರ್ಮಾ ಎಂಬಾತ ಸಂಪರ್ಕಿಸಿ, ಇದೇ ರೀತಿ ಹೂಡಿಕೆ ಮಾಡುವಂತೆ ತಿಳಿಸಿ 90 ಸಾವಿರ ರೂ. ಪಡೆದುಕೊಂಡಿದ್ದಾನೆ. AXWEL ಕಂಪನಿಯ ವ್ಯವಸ್ಥಾಪಕರೆಂದು ಪರಿಚಯಿಸಿಕೊಂಡ ಅರ್ಹಾನ್ ಮಲಿಕ್ ಹಾಗೂ ವಿನೀತ್ ಎಂಬುವವರು 90 ಸಾವಿರ ರೂ. ಪಡೆದಿದ್ದಾರೆ. VERTEX-24 ಕಂಪನಿಯ ವಿಶಾಲ್ ಎಂಬಾತ 30 ಸಾವಿರ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುವಂತೆ ಮಾಡಿದ್ದಾನೆ. ದೂರುದಾರರು ತಮ್ಮ ಹಾಗೂ ಮಗಳ ಬ್ಯಾಂಕ್ ಖಾತೆಗಳಿಂದ ಈ ಹಣವನ್ನು ವರ್ಗಾಯಿಸಿದ್ದಾರೆ.
ನಂತರ ಸಂಬಂಧಪಟ್ಟ ಟ್ರೇಡಿಂಗ್ ಆ್ಯಪ್‌ಗಳಲ್ಲಿ ಭಾರಿ ಲಾಭವಾಗಿರುವುದಾಗಿ ತೋರಿಸಿ ವಂಚಕರು ನಂಬಿಸಿದ್ದಾರೆ. FOREX MINT ಖಾತೆಯಲ್ಲಿ 7 ಸಾವಿರ ಡಾಲರ್ (ಸುಮಾರು 6.48 ಲಕ್ಷ ರೂ.), RUPE STOCKS ಖಾತೆಯಲ್ಲಿ 1.50 ಕೋಟಿ ರೂ. ಹಾಗೂ AXWEL ಖಾತೆಯಲ್ಲಿ 700 ಡಾಲರ್ (ಸುಮಾರು 64 ಸಾವಿರ ರೂ.) ಲಾಭವಾಗಿರುವುದಾಗಿ ತೋರಿಸಲಾಗಿದೆ.
ಈ ಲಾಭದ ಹಣವನ್ನು ಹಿಂಪಡೆಯಲು ದೂರುದಾರರು ಮುಂದಾದಾಗ, ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ವಂಚಕರು ಒತ್ತಾಯಿಸಿದ್ದಾರೆ. ಆದರೆ, ಲಾಭದ ಹಣ ಹಿಂಪಡೆಯಲು ಅವಕಾಶ ನೀಡದೆ ಸತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ಸಿದ್ದಲಿಂಗಪ್ಪ ಅವರು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ನಾಲ್ಕು ಕಂಪನಿಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ, ಅಧಿಕ ಲಾಭದ ಸುಳ್ಳು ಭರವಸೆ ನೀಡಿ ಒಟ್ಟು 5,61,105 ರೂ. ಪಡೆದು ಆನ್‌ಲೈನ್ ಮೂಲಕ ವಂಚಿಸಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(2), 318(4)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.






