Kalaburagi | ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಶಿಲ್ಪಿ ಮಹಾದೇವಪ್ಪ ರಾಂಪೂರೆ: ಶಶೀಲ್ ಜಿ.ನಮೋಶಿ

ಕಲಬುರಗಿ: ದಿ. ಮಹಾದೇವಪ್ಪ ರಾಂಪೂರೆಯವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಶಿಲ್ಪಿಯಾಗಿದ್ದು, ಅವರು ಹಾಕಿದ ಭದ್ರ ಅಡಿಪಾಯದ ಫಲವಾಗಿ ಇಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಮಹಾದೇವಪ್ಪ ರಾಂಪೂರೆಯವರ 105ನೇ ಜನ್ಮದಿನೋತ್ಸವ ಅಂಗವಾಗಿ ಆಯೋಜಿಸಿದ್ದ ನಿವೃತ್ತ ಸಿಬ್ಬಂದಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಬೆಳವಣಿಗೆಗೆ ಶಿಕ್ಷಕರು ಹಾಗೂ ಸಿಬ್ಬಂದಿಯ ಸಮರ್ಪಿತ ಸೇವೆಯೇ ಪ್ರಮುಖ ಕಾರಣವಾಗಿದೆ. ತಾವು ಇಂದು ಈ ಸ್ಥಾನದಲ್ಲಿರಲು ಸಂಸ್ಥೆ ಹಾಗೂ ಶಿಕ್ಷಕರ ಆಶೀರ್ವಾದವೇ ಕಾರಣವಾಗಿದೆ ಎಂದು ತಿಳಿಸಿದರು.
ರಾಂಪೂರೆಯವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದ ದೂರದೃಷ್ಟಿಯ ನಾಯಕರು. ಅವರ ಆದರ್ಶಗಳು ಇಂದಿಗೂ ಸಂಸ್ಥೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 91 ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯಶೋದಾ ಆಸ್ಪತ್ರೆಯ ಸಂಸ್ಥಾಪಕ ಡಾ. ಬಸವರಾಜ ಕೋಳೂರ, ನಿವೃತ್ತ ಐಎಎಸ್ ಅಧಿಕಾರಿ ಅಮರನಾಥ ತಳವಡೆ, ಮಕ್ಕಳ ತಜ್ಞ ಡಾ. ವೀರಭದ್ರಪ್ಪ, ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಪಾಟೀಲ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.






