Kalaburagi | ಭವಿಷ್ಯದ ಪೀಳಿಗೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಿ : ಭಂವರ್ ಸಿಂಗ್ ಮೀನಾ

ಕಲಬುರಗಿ: ನೀರು ಭೂಮಿಯ ಮೇಲಿನ ಜೀವಜಲವಾಗಿದ್ದು, ಇದು ರಾಷ್ಟ್ರೀಯ ಆಸ್ತಿ. ಆದ್ದರಿಂದ ಪ್ರತಿಯೊಬ್ಬರೂ ಮಿತವಾಗಿ ನೀರನ್ನು ಬಳಸುವುದರ ಜೊತೆಗೆ ಮಳೆನೀರು ಸಂಗ್ರಹಣೆ ಮೂಲಕ ಅಂತರ್ಜಲ ಮಟ್ಟವನ್ನು ಉಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಕರೆ ನೀಡಿದರು.
ರವಿವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನಂದಿಕೂರ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಜೀವನದಲ್ಲಿ ನೀರಿನ ಮಹತ್ವವನ್ನು ಒತ್ತಿಹೇಳಿದ ಅವರು, ಅನಗತ್ಯವಾಗಿ ನಲ್ಲಿಗಳಿಂದ ನೀರು ಪೋಲಾಗದಂತೆ ಜಾಗೃತಿ ವಹಿಸಬೇಕು ಎಂದರು. ಮನೆ ಮಟ್ಟದಲ್ಲಿ ಸೋಕ್ ಪಿಟ್, ಸಮುದಾಯ ಮಟ್ಟದಲ್ಲಿ ಲೀಚ್ ಪಿಟ್, ರೀಚಾರ್ಜ್ ಪಿಟ್ ಹಾಗೂ ಮೇಲ್ಛಾವಣಿ ಮಳೆನೀರು ಸಂಗ್ರಹಣೆ ವ್ಯವಸ್ಥೆಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ಜಿಲ್ಲೆಯಲ್ಲಿ ನೀರಿನ ಸಾಕ್ಷರತೆ, ಅಂತರ್ಜಲ ಸಂರಕ್ಷಣೆ ಹಾಗೂ ಸುಸ್ಥಿರ ನೀರಿನ ನಿರ್ವಹಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ಬಾವಿ, ಕೊಳವೆಬಾವಿ ಸೇರಿದಂತೆ ಎಲ್ಲಾ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದರು. ಕಲುಷಿತ ನೀರಿನಿಂದ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ನೀರು ಪೂರೈಕೆ ವ್ಯವಸ್ಥೆಯಾದ ಓವರ್‌ಹೆಡ್ ಟ್ಯಾಂಕ್, ಪೈಪ್ಲೈನ್, ಕೊಳವೆಬಾವಿಗಳ ಸುತ್ತ ಸ್ವಚ್ಛತೆ ಕಾಪಾಡಬೇಕು. ನೀರು ಶುದ್ಧೀಕರಣಕ್ಕಾಗಿ ಕ್ಲೋರಿನೇಷನ್ ಹಾಗೂ ಬ್ಲೀಚಿಂಗ್ ಪೌಡರ್ ಬಳಸಬೇಕು. ಕೊಳವೆಬಾವಿಗಳಿಗೆ ಚರಂಡಿ ನೀರು ಸೇರುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದರು.
ಬೇಸಿಗೆ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ತಕ್ಷಣ ದುರಸ್ತಿ ಕೈಗೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಜಿಲ್ಲಾ ಪಂಚಾಯತ್ ಬಳಿ 5 ಸರ್ಕಾರಿ ಟ್ಯಾಂಕರ್‌ಗಳು ಲಭ್ಯವಿವೆ ಎಂದು ತಿಳಿಸಿದರು.
ನೀರಿನ ಗುಣಮಟ್ಟ ಪರೀಕ್ಷಾ ಅಭಿಯಾನಕ್ಕೆ ಚಾಲನೆ :
ಕಾರ್ಯಕ್ರಮದ ವೇಳೆ ಫೀಲ್ಡ್ ಟೆಸ್ಟ್ ಕಿಟ್ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ನಂದಿಕೂರ ಗ್ರಾಮದಲ್ಲಿ ಆರ್‌ಒ ಪ್ಲಾಂಟ್, ಕೊಳವೆಬಾವಿ, ಟ್ಯಾಪ್ ಹಾಗೂ ಬಾವಿ ನೀರಿನ ಪರೀಕ್ಷೆ ನಡೆಸಿ ಅದರ ಫಲಿತಾಂಶವನ್ನು ಸಾರ್ವಜನಿಕರಿಗೆ ವಿವರಿಸಿದರು.
ಮಳೆಗಾಲದ ಮುನ್ನ ಹಾಗೂ ನಂತರ ನಿಯಮಿತವಾಗಿ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಜಲಮೂಲಗಳು ಕಲುಷಿತಗೊಂಡರೆ ಪರ್ಯಾಯ ಮೂಲಗಳಿಂದ ನೀರು ಪೂರೈಕೆ ಮಾಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಸಹಾಯಕ ಕಾರ್ಯದರ್ಶಿ ರೇವಣಸಿದ್ದಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಜಗದೇವಪ್ಪ ಜೀವಣಗಿ, ಪಿ.ಡಿ.ಓ ಸಂದೀಪ ಗುತ್ತೇದಾರ ಹಾಗೂ ಇತರೆ ಸಿಬ್ಬಂದಿಗಳಿದ್ದರು.







