Kalaburagi | ತೊಗರಿ ಬಿತ್ತನೆ ವೇಳೆ ಮಣ್ಣಿನ ತೇವಾಂಶ ಕಾಪಾಡುವುದು ಅತ್ಯಗತ್ಯ: ಡಾ.ಝಹೀರ್ ಅಹಮದ್

ಕಲಬುರಗಿ: ತೊಗರಿ ಸೇರಿದಂತೆ ಮುಂಗಾರು ಬೆಳೆಗಳ ಯಶಸ್ವಿ ಬೆಳವಣಿಗೆಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಹವಾಮಾನ ವೈಪರೀತ್ಯದ ನಡುವೆಯೂ ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿ ಡಾ. ಝಹೀರ್ ಅಹಮದ್ ಸಲಹೆ ನೀಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಆಯೋಜಿಸಿದ್ದ ಮುಂಗಾರು ಹಂಗಾಮಿನ ಬೆಳೆ ಬಿತ್ತನೆ ಕುರಿತ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷ ಮುಂಗಾರು ವಿಳಂಬ ಹಾಗೂ ಕಡಿಮೆ ಮಳೆಯ ಪರಿಣಾಮ ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಕೆಲವೇ ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಮಣ್ಣಿನ ತೇವಾಂಶವನ್ನು ಕಾಪಾಡಲು ಅದು ಸಾಕಾಗುತ್ತಿಲ್ಲ. ಗಂಟೆಗೆ 24ರಿಂದ 30 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಮಳೆ ಮೋಡಗಳು ನೆಲೆಸದೆ ಮಳೆ ಕೊರತೆ ಉಂಟಾಗುತ್ತಿದೆ. ಹವಾಮಾನ ವೈಪರೀತ್ಯವು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೃಷಿ, ಮಾನವ ಹಾಗೂ ಪ್ರಾಣಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ವಿವರಿಸಿದರು.
ತರಬೇತಿಯಲ್ಲಿ ತೊಗರಿ ಬೀಜೋಪಚಾರ, ಕ್ಯಾಲ್ಸಿಯಂ ಬಳಸಿ ಬೀಜ ಗಟ್ಟಿಗೊಳಿಸುವಿಕೆ, ಕಸ್ಕೂಟ ಕಳೆ ನಿರ್ವಹಣೆ, ಕಡಿಮೆ ಅವಧಿಯ ತಳಿಗಳ ಆಯ್ಕೆ, ಬರಗಾಲದಲ್ಲಿ ಬೆಳೆ ನಿರ್ವಹಣೆ, ಬೋದು ಪದ್ಧತಿಯಲ್ಲಿ ತೊಗರಿ ಬೆಳೆ ಬೆಳೆಯುವುದು, ಸಸ್ಯ ಸಂರಕ್ಷಣೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ನಿವೃತ್ತ ಕೃಷಿ ವಿಜ್ಞಾನಿ ಡಾ. ದಯಾನಂದ ಮಹಾಲಿಂಗ, ಕೃಷಿ ಅಧಿಕಾರಿ ಪ್ರಿಯಾಂಕಾ ಕುಲಕರ್ಣಿ ಹಾಗೂ ಆತ್ಮ ಯೋಜನೆಯ ವಿಭಾಗಾಧಿಕಾರಿ ಶಿವರಾಯ ಸಮಗ್ರ ಕೃಷಿ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿ, ರೈತ ಸಂಪರ್ಕ ಕೇಂದ್ರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೈತರು ಕೃಷಿ ಹಾಗೂ ತೋಟಗಾರಿಕೆ ಸಂಬಂಧಿಸಿದ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆದರು. ಇದೇ ವೇಳೆ ಜೈವಿಕ ವಿಧಾನದಲ್ಲಿ ಬೀಜೋಪಚಾರ ಮಾಡುವ ಪ್ರಾಯೋಗಿಕ ಪ್ರದರ್ಶನವೂ ನಡೆಸಲಾಯಿತು.






