ಕಲಬುರಗಿ | ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆ ಜೋಳ ಖರೀದಿ: ಜಿಲ್ಲೆಯಾದ್ಯಂತ 6 ಖರೀದಿ ಕೇಂದ್ರ ಸ್ಥಾಪನೆ

ಸಾಂದರ್ಭಿಕ ಚಿತ್ರ | PC : freepik
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆ ಜೋಳ ರೈತರಿಂದ ಖರೀದಿಗೆ ಜಿಲ್ಲೆಯಾದ್ಯಂತ 6 ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಕಲಬುರಗಿ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್ಗೆ 2,400 ರೂ. ಗಳಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಲಬುರಗಿ ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಯಾಗಿ ನೇಮಿಸಲಾಗಿದೆ.
ಮೆಕ್ಕೆಜೋಳ ನೋಂದಣಿ ಮತ್ತು ಖರೀದಿಗೆ ಜಿಲ್ಲೆಯಾದ್ಯಂತ 6 ಖರೀದಿ ಕೇಂದ್ರಗಳು ಗುರುತಿಸಲಾಗಿದ್ದು, ಕೂಡಲೇ ರೈತ ಬಾಂಧವರು ಏಕಕಾಲದಲ್ಲಿ ನಡೆಯುವ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿ.ಬಿ.ಟಿ. ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ. ಹೀಗಾಗಿ ರೈತ ಬಾಂಧವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಕ್ಕೆ ಭೇಟಿ ನೀಡಿ ಉತ್ಪನ್ನ ಮಾರಾಟ ಮಾಡುವಂತೆ ತಿಳಿಸಿದೆ.
ಚಿಂಚೋಳಿ ತಾಲೂಕಿನ ಕೊಂಚಾಚವರಂ, ಚಿಮ್ಮಚೋಡ್, ಸುಲೇಪೇಠ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಚಿಂಚೋಳಿ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಕಮಲಾಪೂರ ತಾಲೂಕಿನ ಮಹಾಗಾಂವ ಮತ್ತು ಅಫಜಲಪುರ ತಾಲೂಕಿನ ಗೊಬ್ಬೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಖರೀದಿ ಕೇಂದ್ರಗಳಾಗಿ ಗುರುತಿಸಲಾಗಿದೆ.
ಖರೀದಿ ಕೇಂದ್ರವಾರು ಹೆಚ್ಚಿನ ಮಾಹಿತಿಗೆ ಚಿಂಚೋಳಿ ಮತ್ತು ಸುಲೆಪೇಟ್-9902142080, ಕೊಂಚಾವರಂ-9741093156, ಚಿಮ್ಮನಚೋಡ್-9986171035, ಮಹಾಗಾಂವ-9740626843, ಗೊಬ್ಬೂರ-9739157845 ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ-9449864446 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.







