Kalaburagi | ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಿ : ಶಾಸಕ ಅಲ್ಲಮಪ್ರಭು ಪಾಟೀಲ್
ತಾಜಸುಲ್ತಾನಪುರದಲ್ಲಿ ಹೋಬಳಿ ಮಟ್ಟದ ‘ಪ್ರಜಾ ಸೇವೆ’ ಸಭೆ

ಕಲಬುರಗಿ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಅವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಉನ್ನತಿ ಸಾಧಿಸಬೇಕು ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಕಲಬುರಗಿ ತಾಲೂಕಿನ ತಾಜಸುಲ್ತಾನಪುರದಲ್ಲಿ ನಡೆದ ಹೋಬಳಿ ಮಟ್ಟದ ‘ಪ್ರಜಾ ಸೇವೆ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಪ್ರತಿವರ್ಷ ಸುಮಾರು 58 ಸಾವಿರ ರೂ. ಕೋಟಿ ವೆಚ್ಚ ಮಾಡುತ್ತಿದೆ. ಜನರ ಸಮಸ್ಯೆಗಳನ್ನು ಆಲಿಸಿ ಆಡಳಿತವನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ವರ್ಷ ದಕ್ಷಿಣ ಕ್ಷೇತ್ರದ ರೈತರಿಗೆ ಬೆಳೆ ವಿಮೆ ಅಡಿಯಲ್ಲಿ 30.21 ಕೋಟಿ ರೂ. ಹಾಗೂ ಅತಿವೃಷ್ಟಿ ಹಾನಿಗೆ 7.35 ಕೋಟಿ ರೂ. ಪರಿಹಾರ ನೀಡಲಾಗಿದೆ. ಸೈಯದ್ ಚಿಂಚೋಳಿ–ತಾಜಸುಲ್ತಾನಪುರ ಗ್ರಾಮದ ರೈತರಿಗೆ ಮಾತ್ರ 5.57 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ತಾಜಸುಲ್ತಾನಪುರ–ಬೇಲೂರ ಸಂಪರ್ಕ ರಸ್ತೆಯನ್ನು ‘ಕಲ್ಯಾಣ ಪಥ’ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸುಲ್ತಾನಪುರ–ಗಣಜಲಖೇಡ್ ರಸ್ತೆ ಕಾಮಗಾರಿ 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ರುದ್ರಭೂಮಿಗೆ 20 ಲಕ್ಷ ರೂ., ಹನುಮಾನ ದೇವಸ್ಥಾನ ಜೀರ್ಣೋದ್ಧಾರಕ್ಕೆ 7 ಲಕ್ಷ ರೂ., ಬೀರಲಿಂಗೇಶ್ವರ ದೇವಸ್ಥಾನಕ್ಕೆ 3 ಲಕ್ಷ ರೂ. ಹಾಗೂ ಅಂಬೇಡ್ಕರ್ ಸಮುದಾಯ ಭವನಕ್ಕೂ ಅನುದಾನ ನೀಡಲಾಗುವುದು ಎಂದು ಹೇಳಿದರು.
ಯುವಕರಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವಕ ಸಂಘ’ ರಚಿಸಲಾಗುತ್ತಿದ್ದು, ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ. 16ರಿಂದ 35 ವರ್ಷದ ಯುವಕ-ಯುವತಿಯರು ಸಂಘದ ಸದಸ್ಯರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳ ಸ್ವೀಕೃತಿಗಾಗಿ ಸಭೆಯಲ್ಲಿ ಆರು ಕೌಂಟರ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಲಿಖಿತ ಅರ್ಜಿ ಸಲ್ಲಿಸಿದರೆ ಮಾತ್ರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಪ್ರಸಕ್ತ ವರ್ಷ ಬರಗಾಲದ ಛಾಯೆ ಆವರಿಸಿದ್ದು, ಬೆಳೆ ದರ್ಶಕ ತಂತ್ರಾಂಶದ ಮೂಲಕ ಬೆಳೆ ದಾಖಲಿಸಲಾಗುತ್ತಿದೆ. ಈ ವರ್ಷ 4.53 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, 5.50 ಲಕ್ಷ ಹೆಕ್ಟೇರ್ ಪ್ರದೇಶ ವಿಮೆ ವ್ಯಾಪ್ತಿಗೆ ಬಂದಿದೆ. ಕಳೆದ ವರ್ಷ ರೈತರಿಗೆ 585 ಕೋಟಿ ರೂ. ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ, ವಿಬಿಜಿ-ರಾಮ್‌ಜಿ ಯೋಜನೆಯಡಿ ಕೆಲಸ ಸಿಗುತ್ತಿಲ್ಲ, ವೃದ್ಧಾಪ್ಯ ವೇತನ ಸ್ಥಗಿತಗೊಂಡಿದೆ ಎಂದು ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ಚಂದ್ರಶೇಖರ ಪಾಟೀಲ, ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಭೋಸಗಾ ಕೆರೆಯಿಂದ ಹಳ್ಳಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಯುವಕ ಗುರು ಸುಲ್ತಾನಪುರ, ನಿಗದಿತ ಏಳು ಗಂಟೆಗಳ ಬದಲಿಗೆ ಕೇವಲ ಎರಡು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ ಕಬ್ಬು ಬೆಳೆ ಒಣಗುತ್ತಿದೆ ಎಂದು ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ಸಮಸ್ಯೆ ಪರಿಹರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ, ಡಿ.ಸಿ.ಪಿ ಶಾಲೂ, ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿ.ಡಿ.ಪಿ.ಐ ಶಂಕ್ರಮ ಢವಳಗಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ, ಜಿಲ್ಲಾ ಉದ್ಯೋಗ ಅಧಿಕಾರಿ ಭಾರತಿ, ತಾಲೂಕಾ ಪಂಚಾಯತ್ ಇ.ಓ ಮಾನಪ್ಪ ಕಟ್ಟಿಮನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬಾಗಿಯಾಗಿದ್ದರು. ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಜಾ ಸೇವೆ ಸಭೆಯ ಉದ್ದೇಶ ವಿವರಿಸಿದರು. ವಿವಿಧ ಇಲಾಖೆಯ ಮಳಿಗೆ ತೆರದು ಸಾರ್ವಜನಿಕರಿಗೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ಸಹ ನೀಡಲಾಯಿತು.






