Kalaburagi | ಆ.9ರಿಂದ ಮಲ್ಲಿಕಾರ್ಜುನ ಸಿ. ಮುಗಳಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಕಲಬುರಗಿ, ಆ.8: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಯುವ ಚಿತ್ರಕಲಾವಿದ ಮಲ್ಲಿಕಾರ್ಜುನ ಸಿ. ಮುಗಳಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆಗಸ್ಟ್ 9ರಿಂದ 11ರವರೆಗೆ ನಗರದ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ನಡೆಯಲಿದೆ.
ಪ್ರದರ್ಶನವನ್ನು ಆಗಸ್ಟ್ 9ರಂದು ಬೆಳಿಗ್ಗೆ 11.30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ. ಮಲ್ಲಿಕಾರ್ಜುನ ಬಾಗೋಡಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಹಾಗೂ ಚಿತ್ರಕಲಾವಿದ ಬಸವರಾಜ ಕಮಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹಿರಿಯ ಚಿತ್ರಕಲಾವಿದ ಚಂದ್ರಹಾಸ ವೈ. ಜಾಲಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶನದಲ್ಲಿ ಮಲ್ಲಿಕಾರ್ಜುನ ಸಿ. ಮುಗಳಿ ಅವರು ಜಲವರ್ಣ ಮಾಧ್ಯಮದಲ್ಲಿ ರಚಿಸಿರುವ 30ಕ್ಕೂ ಹೆಚ್ಚು ನಿಸರ್ಗ ಹಾಗೂ ಐತಿಹಾಸಿಕ ಚಿತ್ರಕೃತಿಗಳು ಪ್ರದರ್ಶನಗೊಳ್ಳಲಿವೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವ ಕಲ್ಲಿನ ರಥ, ಪುಷ್ಕರಣಿ, ಕಾವಲು ಗೋಪುರ, ಕಮಲ ಮಹಲ್, ಪುರಂದರ ಮಂಟಪ ಹಾಗೂ ಯಂತ್ರೋದ್ದಾರಕ ಹನುಮ ದೇವಸ್ಥಾನದಂತಹ ಐತಿಹಾಸಿಕ ಸ್ಮಾರಕಗಳನ್ನು ಜಲವರ್ಣದಲ್ಲಿ ಜೀವಂತವಾಗಿ ಚಿತ್ರಿಸಿರುವ ಕೃತಿಗಳು ಕಲಾಭಿಮಾನಿಗಳ ಗಮನ ಸೆಳೆಯಲಿವೆ.
ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಲ್ಲಿಕಾರ್ಜುನ ಸಿ. ಮುಗಳಿ ಅವರು ರಾಜ್ಯದ ವಿವಿಧೆಡೆ ನಡೆದ ಏಳಕ್ಕೂ ಹೆಚ್ಚು ಚಿತ್ರಕಲಾ ಶಿಬಿರಗಳು ಹಾಗೂ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು, ಕಲಾಸಕ್ತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.






