ಕಲಬುರಗಿ | 800ಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚಿಸಿದ ವ್ಯಕ್ತಿಯ ಬಂಧನ : ಡಾ.ಶರಣಪ್ಪ ಎಸ್.ಡಿ.
ʼʼಸಿಇಎನ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆʼʼ

ಬಂಧಿತ ಆರೋಪಿ
ಕಲಬುರಗಿ: ಸಾರ್ವಜನಿಕರಿಗಾಗಿ ವಿವಿಧ ಆಕರ್ಷಕ ಹೂಡಿಕೆಗಳ ಯೋಜನೆಗಳನ್ನು ರೂಪಿಸಿ, 800ಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣದ ರಂಗಾರೆಡ್ಡಿ ಮೂಲದ ನಿವಾಸಿಯಾಗಿರುವ ಎಮ್.ಡಿ ರಾಮಚಂದ್ರ ಚಾರಿ ಅಕುಲ್ ಅಲಿಯಾಸ್ ರಾಮು ಅಕುಲ್ ಚಾರಿ(58) ಬಂಧಿತ ಆರೋಪಿಯಾಗಿದ್ದು, ಈತ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿನ ಆರ್ಕೆಡ್ ಬಿಲ್ಡಿಂಗ್ನಲ್ಲಿ 'ವಿನಸ್ ಎಂಟರ್ ಪ್ರೈಜಸ್' ಎಂಬ ಹೆಸರಿನ ಕಚೇರಿ ತೆರೆದು ವಿವಿಧ ಆಕರ್ಷಕ ಆನ್ಲೈನ್ ಹೂಡಿಕೆಗಳಿಂದ ಪ್ರತಿಶತ 15 ರಿಂದ 20 ರವರೆಗೆ ಲಾಭಾಂಶ ನೀಡುವುದಾಗಿ ಹೇಳಿ ವಂಚಿಸಿದ್ದಾನೆ ಎಂದರು.
ಕಳೆದ ಮೇ 23 ರಂದು ಇಲ್ಲಿನ ಕೆ.ಹೆಚ್.ಬಿ ಅಕ್ಕಮಹಾದೇವಿ ಕಾಲೋನಿಯ ನಿವಾಸಿ ಉಲ್ಲಾಸ ಅಶೋಕ ನೇಲ್ಲಗಿ ಅವರು ನಗರದ ಸಿ.ಇ.ಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಈ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಕುರಿತು ತನಿಖೆ ಪ್ರಾರಂಭಿಸಿದಾಗ ರಾಮು ಅಕುಲ್ ಚಾರಿಯು ಮೂರು ಸ್ಕೀಮ್ ಗಳ ಯೋಜನೆ ತೋರಿಸಿ, ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಒಟ್ಟು 800ಕ್ಕೂ ಹೆಚ್ಚು ಗ್ರಾಹಕರಿಗೆ ಅಧಿಕ ಲಾಭಾಂಶದ(ಅಧಿಕ ಬಡ್ಡಿದರ) ಆಸೆ ತೋರಿಸಿ ಮೋಸ ಮಾಡಿ ಪಕ್ಕದ ತೆಲಂಗಾಣದ ಹೈದರಾಬಾದ್ ನಲ್ಲಿ ತಲೆ ಮೆರೆಸಿಕೊಂಡಿದ್ದನು. ವಿಶೇಷ ತನಿಖಾ ತಂಡದಿಂದ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಇದ್ದರು.
ಯಾವುದೇ ವ್ಯಕ್ತಿಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಹಣ ಹೂಡಿಕೆ ಮಾಡಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಹೆಚ್ಚಿನ ಲಾಭವನ್ನು (ಶೇ.15 ರಿಂದ 20 ರಷ್ಟು) ನೀಡಲು ಸಾಧ್ಯವಿಲ್ಲ. ಸಾರ್ವಜನಿಕರು ದುರಾಸೆ ಹಾಗೂ ಆಮೀಷಗಳಿಗೆ ಒಳಗಾಗದೇ, ಜಾಗೃತರಾಗಿರಬೇಕು. ಈ ರೀತಿಯ ಹೂಡಿಕೆ ಹಣದಿಂದ ಬರುವ ಲಾಭಾಂಶದಿಂದ ಹಣ ದುಪ್ಪಟ್ಟು ಮಾಡುವ ಹಾಗೂ ವಿವಿಧ ಸ್ಕೀಮ್ಗಳ ಹೆಸರಿನಲ್ಲಿ ಹೆಚ್ಚಿನ ಹಣಗಳಿಸುವ ಹಾಗೂ ಈ ರೀತಿಯ ಅಪರಾಧಗಳಲ್ಲಿ ಭಾಗಿಯಾಗುವಂತೆ ಪ್ರೇರೆಪಿಸುವ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
-ಡಾ. ಶರಣಪ್ಪ ಎಸ್.ಡಿ., ಕಮೀಷನರ್, ಕಲಬುರಗಿ







