ಕಲಬುರಗಿ | ಅಭಿವೃದ್ಧಿ ಕುಂಠಿತ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಕಲಬುರಗಿ: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 47 ಹಾಗೂ 48ರಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕುಂಠಿತಗೊಂಡಿರುವುದನ್ನು ಖಂಡಿಸಿ, ಕಲಬುರಗಿ ಬಿಜೆಪಿ ದಕ್ಷಿಣ ಮಂಡಲ ಹಾಗೂ ಸ್ಥಳೀಯ ನಾಗರಿಕರ ನೇತೃತ್ವದಲ್ಲಿ ಶಹಾಬಾದ್ ಕ್ರಾಸ್ ಸಮೀಪ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ಮತ್ತು ನಾಗರಿಕರು, ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಾರ್ಡ್‌ಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ಹೊನ್ನಮ್ಮ ಬಾಬು ಹಾಗರಗಿ, ವಿಶಾಲ್ ಧರ್ಗಿ, ಶಂಭು ಪಾಟೀಲ್ ಬಾಳಬಟ್ಟಿ, ಮಲ್ಲು ಊದನೂರ, ಗುರು ಪಟ್ಟಣ, ಮುಖಂಡರಾದ ರವಿ ಹಾಗರಗಿ, ಸಿದ್ರಾಮ ಮಹಾಂತಗೋಳ, ಸಿದ್ದಣ್ಣ ಬುಳ್ಳಾ, ಪ್ರಕಾಶ ಪಾಟೀಲ್ ಹಿರಾಪುರ, ರಾಜು ವಾಡೇಕರ, ಜಗನ್ನಾಥ ಪಟ್ಟಣಶೆಟ್ಟಿ, ಮಹಾದೇವ ಬೆಳಮಗಿ, ವಿಜಯಲಕ್ಷ್ಮಿ ಗೊಬ್ಬೂರಕರ, ಜ್ಯೋತಿ ಪಾಟೀಲ್, ಶ್ರೀನಿವಾಸ್ ದೇಸಾಯಿ, ವಿಶ್ವನಾಥ ಸಾಲಿಮಠ, ರಾಜಶೇಖರ ನಂದೂರ, ಅಮಿತ ಚಿಟ್ಟಗುಪ್ಪಿ, ಗುಂಡು ಮಹಾಂತಗೋಳ, ಚನ್ನು ಬಿರಾದಾರ, ಅಪ್ಪಾಸಾಬ್ ಜಂಗ್ಳೆ, ಉದಯ ರೇಷ್ಮಿ, ಮಲ್ಲಿಕಾರ್ಜುನ ಜಿನಕೇರಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಪ್ರತಿಭಟನೆಯ ವೇಳೆ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.






