ಕಲಬುರಗಿ | ಮಾಳಿಂಗರಾಯ ದೇವಸ್ಥಾನವನ್ನು ಕುರುಬರಿಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕಲಬುರಗಿ : ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿನ ಮಾಳಿಂಗರಾಯ ದೇವಸ್ಥಾನವನ್ನು ಬೇರೆ ಸಮುದಾಯದವರು ಆರೈಕೆ ಮಾಡುತ್ತಿದ್ದಾರೆ, ಅದರ ಪೂಜೆ ಪುರಸ್ಕಾರ ಸೇರಿದಂತೆ ದೇವಸ್ಥಾನದ ಆಡಳಿತವನ್ನು ಕುರುಬ ಸಮುದಾಯಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿ, ಜಿಲ್ಲಾ ಕುರುಬರ ಸಂಘದಿಂದ ನಗರದ ಜಗತ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಾಳಿಂಗರಾಯ ದೇವಸ್ಥಾನದ ಹಸ್ತಾಂತರ ಕುರಿತು ಕಲಬುರಗಿ ತಹಶೀಲ್ದಾರರು ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ, ಕೂಡಲೇ ಅವರು ಸತ್ಯಾಸತ್ಯತೆಯನ್ನು ತಿಳಿದುಕೊಂಡು ದೇವಸ್ಥಾನದ ಹೊಣೆಯನ್ನು ನಮ್ಮ ಸಮುದಾಯಕ್ಕೆ ಒಪ್ಪಿಸಬೇಕು ಹಾಗೂ ದೇವಸ್ಥಾನದ ಪೂಜೆ ನೆರವೇರಿಸಲು ಕುರುಬ ಸಮುದಾಯದವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಹಳ್ಳಿಗಳಿಂದ ಬಂದ ಪ್ರತಿಭಟನಾಕಾರರು ಇಲ್ಲಿನ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ತನಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಇದಕ್ಕೂ ಮುನ್ನ ಜಗತ್ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ, ಸಂಗೊಳ್ಳಿ ರಾಯಣ್ಣನ ಚಿತ್ರವಿರುವ ಬಾವುಟ ಪ್ರದರ್ಶಿಸಿದರು. ಅಲ್ಲದೆ, ಡೊಳ್ಳು, ತಮಟೆ ಬಾರಿಸಿ, ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೇಳಕುಂದಾ (ಬಿ) ಗ್ರಾಮದ ಮಾಳಿಂಗರಾಯ ದೇವಸ್ಥಾನವು ಕುರುಬ ಸಮುದಾಯಕ್ಕೆ ಸೇರಿದೆ, ನಮ್ಮ ಸಮಾಜದ ಮನೆದೇವರ ದೇವಸ್ಥಾನವನ್ನು ಬಲಿಷ್ಠ ಸಮುದಾಯದ ಜನರು ದಬ್ಬಾಳಿಕೆಯಿಂದ ಕಸಿದುಕೊಂಡಿದ್ದಾರೆ. ಅವರಿಗೆ ತಹಶೀಲ್ದಾರರು ಸಾಥ್ ನೀಡಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಬಸವರಾಜ ಮದ್ರಿಕಿ, ಭಗವಂತರಾಯ ಪಾಟೀಲ್, ತಮ್ಮಣ್ಣ ಭಾಗೇವಾಡಿ, ನಿಂಗಣ್ಣ ರದ್ದೇವಡಗಿ, ವಿಠ್ಠಲ ಪೂಜಾರಿ, ಈರಣ್ಣ ದಂಗಾಪೂರ, ಶಿವಲಿಂಗಪ್ಪ ಪಟ್ಟಣ ಯಳಸಂಗಿ ಸೇರಿದಂತೆ ಹಲವರು ಇದ್ದರು.
ವರದಿಗಾರರ ಮೇಲೆ ಹಲ್ಲೆಗೆ ಯತ್ನ :
ಮಾಳಿಂಗರಾಯ ದೇವಸ್ಥಾನದ ಪೂಜೆಗೆ ಕುರುಬ ಸಮಾಜದ ಪೂಜಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕೆಲವರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸುದ್ದಿ ಮಾಡಲು ಹೋದ 'ವಾರ್ತಾಭಾರತಿ ವರದಿಗಾರ' ಸೇರಿದಂತೆ ಇತರೆ ವರದಿಗಾರರ ದ್ವಿಚಕ್ರ ವಾಹನಗಳನ್ನು ತಡೆದು, ಜಖಂಗೊಳಿಸಲು ಮುಂದಾಗಿದ್ದಾರೆ. ಅಲ್ಲದೆ, ಕಟ್ಟಿಗೆ ತುಂಡಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ವರದಿಗಾರರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲೇ ಇದ್ದ ಪೊಲೀಸರು ಕೈಕಟ್ಟಿ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.







