ಕಲಬುರಗಿ: ಹಳೆಯ ಮೀಸಲಾತಿ ಅನ್ವಯ ನೇಮಕಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕಲಬುರಗಿ: ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣದ ನ್ಯಾಯಾಲಯದ ಅಂತಿಮ ತೀರ್ಪು ಹೊರಬರುವವರೆಗೆ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಿ, ಅದೇ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಲಂಬಾಣಿ ಸೇವಾ ಸಂಘ ಹಾಗೂ ವಿವಿಧ ಬಂಜಾರಾ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಬಂಜಾರ ಭವನದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಲಾಹೋಟಿ ಪೆಟ್ರೋಲ್ ಪಂಪ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಮಧ್ಯಂತರ ತಡೆಯಾಜ್ಞೆಯೂ ಇರುವ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ಹೊರಬರುವವರೆಗೆ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು. ಹಿಂದಿನ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಿ, ಅದರನ್ವಯ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ವ್ಯವಸ್ಥೆಯಲ್ಲಿ ಏಕಾಏಕಿ ಬದಲಾವಣೆ ಮಾಡುವುದರಿಂದ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದ್ದು, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕ ಅದರನ್ವಯ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಮುಖಂಡರು ಹೇಳಿದರು.
ನ್ಯಾಯಾಲಯದ ಅಂತಿಮ ತೀರ್ಪು ಹೊರಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯಂತೆ ನೇಮಕಾತಿ ಮುಂದುವರಿಸುವ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಂಡು, ಉದ್ಯೋಗಾಕಾಂಕ್ಷಿಗಳ ಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪೂಜ್ಯ ಬಲಿರಾಮ ಮಹಾರಾಜ, ಮುರಹರಿ ಮಹಾರಾಜ, ಮಾತಾ ಲತಾ ದೇವಿ, ಡಾ. ಸುಭಾಷ್‌ಚಂದ್ರ ರಾಠೋಡ್, ರಾಜ್ಯ ಬಂಜಾರಾ ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ವಿಠ್ಠಲ ಜಾಧವ್, ಖೇಮಲಿಂಗ ಎಚ್., ಬಿ.ಬಿ. ನಾಯಕ್, ಸಂತೋಷ ಅಡೆ, ಶಾಮರಾವ್ ಪವಾರ್, ನಾಮದೇವ ರಾಠೋಡ್, ಕೃಷ್ಣ ನಾಯಕ್, ಶಂಕರ ಚವ್ಹಾಣ ಯಳಸಂಗಿ, ಗೋಪಾಲ ಚವ್ಹಾಣ, ಸೈನಿಕ ರಾಠೋಡ್, ಚಂದು ಜಾಧವ್, ರವಿ ರಾಠೋಡ್, ವಿನೋದ್ ಚವ್ಹಾಣ, ಆಕಾಶ್ ರಾಠೋಡ್, ಸುರೇಶ್ ರಾಠೋಡ್, ದತ್ತು ಜಾಧವ್, ಲಕ್ಷ್ಮಣ ರಾಠೋಡ್, ಸುಭಾಷ್ ರಾಠೋಡ್ ಸೇರಿದಂತೆ ವಿವಿಧ ಬಂಜಾರಾ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






