ಕಲಬುರಗಿ | ಕೋಲಿ, ಕಬ್ಬಲಿಗರನ್ನು ಎಸ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಡಿ.29 ರಂದು ಬೃಹತ್ ಪ್ರತಿಭಟನೆ

ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಕೂಡಲೇ ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಇದೇ ಡಿ.29 ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಸಮುದಾಯದ ಮುಖಂಡರಾದ ಶರಣಪ್ಪ ತಳವಾರ ಹಾಗೂ ಶೋಭಾ ಬಾಣಿ ಹೇಳಿದರು.
ನಗರದಲ್ಲಿ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ನಡೆಯಲಿರುವ ಕೋಲಿ, ಕಬ್ಬಲಿಗ ಸಮುದಾಯದ ಸ್ವಾಭಿಮಾನಿಗಳ ಪ್ರತಿಭಟನಾ ರ‍್ಯಾಲಿಯು ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದೆ. ಪ್ರತಿಭಟನೆಯಲ್ಲಿ 22 ತಾಲೂಕುಗಳಿಂದ 30 ಸಾವಿರಕ್ಕೂ ಹೆಚ್ಚಿನ ಜನ ಸೇರಲಿದ್ದು, ವಿವಿಧ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.
ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ 1996ರಿಂದ ಒತ್ತಾಯಿಸುತ್ತಾ ಬಂದಿದ್ದೇವೆ, ಹಲವು ಬಾರಿ ಗಂಗಾಮತ ಮತ್ತು ಅದರ ಉಪಜಾತಿಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದರೂ ಪದೇ ಪದೇ ವಾಪಸ್ ಕಳುಹಿಸಲಾಗುತ್ತಿದೆ, ಹಾಗಾಗಿ ಈ ಬಾರಿ ಸೂಕ್ತ ದಾಖಲೆಗಳೊಂದಿಗೆ ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಶಿವಕುಮಾರ್ ನಾಟೀಕಾರ ಮಾತನಾಡಿ, ನಮ್ಮ ಹೋರಾಟ ಯಾವುದೇ ಸರಕಾರ, ಪಕ್ಷದ ವಿರುದ್ಧ ಇಲ್ಲ. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ. ಬೃಹತ್ ಪ್ರತಿಭಟನೆಯಲ್ಲಿ ಕಲಬುರಗಿ ಸುತ್ತಮುತ್ತಲಿನ ಜಿಲ್ಲೆಗಳ ಸಮುದಾಯದ ಮುಖಂಡರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿರಾಜ್ ಕೊರವಿ, ತಿಪ್ಪಣ್ಣ ರೆಡ್ಡಿ, ಭಗವಂತರಾಯ ಬೆಣ್ಣೂರ, ವಿದ್ಯಾಧರ ಮಂಗಳೂರು, ದಿಗಂಬರ ಕರಜಗಿ, ಭೀಮರಾಯ ಜನಿವಾರ, ಸುರೇಶ್ ಹುಡಗಿ, ಲಕ್ಷ್ಮೀಪುತ್ರ ಜಮಾದಾರ್ ಸೇರಿದಂತೆ ಮತ್ತಿತರರು ಇದ್ದರು.







