ಕಲಬುರಗಿ | ಗಣಿತ, ವಿಜ್ಞಾನ ವಸ್ತು ಪ್ರದರ್ಶನ; ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ

ಕಲಬುರಗಿ : ಮಕ್ಕಳಲ್ಲಿ ವಿಜ್ಞಾನ ಮತ್ತು ಗಣಿತ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವ ದೃಷ್ಟಿಯಿಂದ ನಗರದ ಗುಬ್ಬಿ ಕಾಲೋನಿಯ ಮಾತೋಶ್ರೀ ಸರೋಜಾ ಸುಭಾಷ್ ಗುತ್ತೇದಾರ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ʼಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ’ ಗಮನ ಸೆಳೆಯಿತು.
ವಸ್ತು ಪ್ರದರ್ಶನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷ ಗಿರೀಶ ಕಡ್ಲೇವಾಡ ಉದ್ಘಾಟಿಸಿದರು. ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಒಂದು ಶೈಕ್ಷಣಿಕ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಮತ್ತು ಗಣಿತ ಸಂಬಂಧಿತ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಾರೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಕೌಶಲಗಳನ್ನು ಅಭಿವ್ಯಕ್ತಿಸಲು ಮತ್ತು ಹೊಸ ತಾಂತ್ರಿಕತೆಯನ್ನು ಅರಿಯಲು ಒಳ್ಳೆಯ ವೇದಿಕೆಯಾಗಿದೆ ಎಂದರು.
ಪರಮಾಣುಗಳ ರಚನೆ, ವಿದ್ಯುತ್ಕಾಂತೀಯ ಕ್ರೇನ್, ಪರಿಸರ ಮಾಲಿನ್ಯ ನಿಯಂತ್ರಣ, ರಕ್ತ ಶುದ್ಧೀಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ನೀರಿನ ಮಟ್ಟ ಸೂಚಕ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ, ಚಂದ್ರ ಹಾಗೂ ಸೂರ್ಯ ಗ್ರಹಣ, ಜೈವಿಕ ಅನಿಲ, ಮೂತ್ರ ಪಿಂಡದ ರಚನೆ, ರೋಮನ್ ಸಂಖ್ಯಾ ಪದ್ಧತಿ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ರಾಘವೇಂದ್ರ ಚಿಂಚನಸೂರ ಮಾತನಾಡಿ, ಸೃಜನಶೀಲತೆಯನ್ನು ಉತ್ತೇಜಿಸುವುದು, ಪ್ರಾಯೋಗಿಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಆಸಕ್ತಿ, ತೀರ್ಮಾನಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ವಿಧಾನಕ್ಕೆ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಪಠ್ಯಪುಸ್ತಕದ ಅರಿವನ್ನು ವಾಸ್ತವ ಜಗತ್ತಿನಲ್ಲಿ ಹೇಗೆ ಅನ್ವಯಿಸಬಹುದು ಎಂಬುದನ್ನು ಕಲಿಸುತ್ತದೆ. ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನಗಳ ಪರಿಚಯವನ್ನು ಮಾಡುವುದು. ಸಮಸ್ಯೆ ಪರಿಹಾರ ಮತ್ತು ವಿಶ್ಲೇಷಣೆ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯಗುರು ಐಶ್ವರ್ಯಾ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.







