Kalaburagi | ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾಗಲಿ: ಪ್ರೊ.ಎಚ್.ಟಿ.ಪೋತೆ
‘ಶರಣರ ಹಾಗೂ ಸಂತರ ಸಂಕ್ಷಿಪ್ತ ಜೀವನ ಕಥನ’ ಕೃತಿ ಬಿಡುಗಡೆ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮಾಜದಲ್ಲಿ ಪುಸ್ತಕ ಓದುವ ಸಂಸ್ಕೃತಿ ಮತ್ತೆ ಹೆಚ್ಚಾಗಬೇಕಿದೆ ಎಂದು ನಾಡಿನ ಹಿರಿಯ ಸಾಹಿತಿ ಪ್ರೊ. ಎಚ್.ಟಿ.ಪೋತೆ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ ಅವರು ರಚಿಸಿದ ‘ಶರಣರ ಹಾಗೂ ಸಂತರ ಸಂಕ್ಷಿಪ್ತ ಜೀವನ ಕಥನ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕವು ವಚನ ಸಾಹಿತ್ಯ, ತತ್ವಪದ ಸಾಹಿತ್ಯ, ಕನ್ನಡ ಸಾಹಿತ್ಯ ಹಾಗೂ ಸೂಫಿ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳ ಉಗಮ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಂತಹ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಈ ಭಾಗದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅಧ್ಯಾಪಕರು ಅಧ್ಯಯನಶೀಲ, ಚಿಂತನಶೀಲ ಮತ್ತು ಸಂಶೋಧನಾಶೀಲರಾಗಬೇಕು ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆದ ಪ್ರೊ. ಎಚ್.ಟಿ. ಪೋತೆ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಮಾತನಾಡಿ, ಸರಳ ಭಾಷೆಯಲ್ಲಿ ರಚಿಸಿರುವ ಈ ಕೃತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲಾಗುವ ಶರಣರು ಹಾಗೂ ಸಂತರ ಜಯಂತಿಗಳ ಪರಿಚಯದ ಜೊತೆಗೆ 33 ಮಹಾನ್ ಶರಣರ ಸಂಕ್ಷಿಪ್ತ ಜೀವನ ಕಥನವನ್ನು ಉತ್ತಮವಾಗಿ ದಾಖಲಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ನಾರಾಯಣ ರೋಲೆಕರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ ಮೋರಗೆ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕಿ ಡಾ. ಭಾಗ್ಯಜ್ಯೋತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ರಾಮಪ್ಪ ಬಣಗಾರ ನಿರೂಪಿಸಿದರು. ಡಾ. ಪ್ರಿಯದರ್ಶಿನಿ ವಂದಿಸಿದರು.
ವೇದಿಕೆಯಲ್ಲಿ ಡಾ. ರಾಮಲಿಂಗಪ್ಪ ಭೋಸಲೆ, ಡಾ. ಪ್ರಿಯದರ್ಶಿನಿ, ಡಾ. ಜ್ಯೋತಿ ಕೆ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.






