ಕಲಬುರಗಿ | ಮನದಲ್ಲಿ ಅರಳುವ ಭಾವನೆಗಳು ಸದಾ ಸಮಾಜಮುಖಿಯಾಗಲಿ : ಡಾ.ಗುರುಮೂರ್ತಿ ಶಿವಾಚಾರ್ಯರು

ಕಲಬುರಗಿ : ನಮ್ಮ ಮನದಲ್ಲಿ ಅರಳುವ ಭಾವನೆಗಳು ಸದಾ ಸಮಾಜಮುಖಿಯಾಗಿದ್ದರೆ ಬದಲಾವಣೆ ಸಾಧ್ಯ ಎಂದು ಪಾಳಾ ಕಟ್ಟಿಮನಿ ಹಿರೇಮಠ ಸಂಸ್ಥಾನದ ಡಾ.ಗುರುಮೂರ್ತಿ ಶಿವಾಚಾರ್ಯರು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಯುವ ಲೇಖಕಿ ರೂಪಾ ಪೂಜಾರಿಯವರ ʼಕನಸಿನ ಭಾವನೆ ಎಂಬ ಚೊಚ್ಚಲʼ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಭೆಗೆ ಬಡತನ ಅಡ್ಡಿ ಆಗದು. ಆ ಬಡತನದಲ್ಲಿ ಅರಳುವ ಭಾವನೆಗಳು ಅಕ್ಷರ ರೂಪಕ್ಕಿಳಿದಾಗ ಗಟ್ಟಿ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಅದು ಮುಂದೆ ಭವಿಷ್ಯದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಲೇಖಕಿ ರೂಪಾ ಪೂಜಾರಿಕ ಅವರ ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಮಾದರಿಯಾಗಲಿ. ಅವಳ ಪ್ರತಿಭೆ, ಛಲ ಮತ್ತು ಗುರಿ ಮೆಚ್ಚುವಂಥದು. ತಂದೆ, ತಾಯಿ ಮತ್ತು ವಂಶ ಋಣಗಳು ಬದುಕಿನ ಬೆಳಕಾಗಿವೆ ಎಂದರು.
ಕೃತಿ ಪರಿಚಯಿಸಿದ ಲೇಖಕಿ-ಶಿಕ್ಷಕಿ ಅನುಪಮಾ ಅಪಗುಂಡೆ, ಗಾಂಭೀರತೆ ಮತ್ತು ಪ್ರಜ್ಞಾ ಪೂರ್ವಕವಾಗಿ ಬದುಕಲು ಕೃತಿ ಮುಖ್ಯವಾಗಿದೆ. ಚಿಂತನಶೀಲ ನುಡಿಮುತ್ತುಗಳು ಜೀವನದ ನಾಡಿಯಂತೆ ಕ್ರಿಯಾತ್ಮಕವಾಗಿವೆ. ಸಂಸ್ಕಾರಯುತ ಬದುಕಿಗೆ ಸ್ಪೂರ್ತಿ ತುಂಬುತ್ತವೆ. ಈ ಕೃತಿ ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಪೂರಕವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಶಿಕ್ಷಕರಾದ ಗೀತಾ ಭರಣಿ, ಕಲ್ಲಾಲಿಂಗ ದಿಕ್ಸಂಗಿಕರ್, ಲೇಖಕಿ ತಂದೆ ತಾಯಿಯಾದ ಶಿವಪುತ್ರ ಪೂಜಾರಿ, ಗುರುಬಾಯಿ ಪೂಜಾರಿ, ರವೀಂದ್ರಕುಮಾರ ಭಂಟನಳ್ಳಿ ಮಾತನಾಡಿದರು.
ಪ್ರಮುಖರಾದ ರಾಜೇಂದ್ರ ಮಾಡಬೂಳ, ಶಿಲ್ಪಾ ಜೋಶಿ, ಶಕುಂತಲಾ ಪಾಟೀಲ, ಕಲ್ಯಾಣಕುಮಾರ ಶೀಲವಂತ, ಎಂ.ಎನ್. ಸುಗಂಧಿ, ದಿನೇಶ ಮದಕರಿ, ಗಣೇಶ ಚಿನ್ನಾಕಾರ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಸಿ.ಎಸ್.ಮಾಲಿಪಾಟೀಲ, ಶಿವಾನಂದ ಮಠಪತಿ, ವೀಣಾ ಜಿ.ಕೆ., ರಮೇಶ ಡಿ ಬಡಿಗೇರ, ಚಂದ್ರಕಾoತ ಸೂರನ್, ಅರುಂಧತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.







