Kalaburagi | ಕನ್ನಡ ವಿಮರ್ಶೆಯ ತಾತ್ವೀಕರಣ ಸಾಹಿತ್ಯದ ಮರುಪರಿಶೀಲನೆಗೆ ಹೊಸ ದಾರಿ ತೋರಿಸಲಿ: ಪ್ರೊ.ಸಬೀಹಾ ಭೂಮಿಗೌಡ

ಕಲಬುರಗಿ: ಸಾಹಿತ್ಯ ಕೃತಿಗಳ ವಿಮರ್ಶೆಯನ್ನು ವೈಯಕ್ತಿಕ ನೆಲೆಯಿಂದ ಹೊರತಂದು, ಸಂಘಟಿತ ಚರ್ಚೆ, ಮಂಥನ ಮತ್ತು ವಿಚಾರ ವಿನಿಮಯದ ಮೂಲಕ ನಡೆಸಿದಾಗ ಸಾಹಿತ್ಯದ ಬಹುಮುಖ ಸಾಧ್ಯತೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಕನ್ನಡ ವಿಮರ್ಶೆಯ ತಾತ್ವೀಕರಣವು ಸಾಹಿತ್ಯದ ಮರುಪರಿಶೀಲನೆಗೆ ಹೊಸ ದಾರಿ ತೋರಿಸಬೇಕು ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕನ್ನಡ ವಿಭಾಗ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಕನ್ನಡ ವಿಮರ್ಶೆಯ ತಾತ್ವೀಕರಣ’ ವಿಷಯದ ಮೂರು ದಿನಗಳ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೈಯಕ್ತಿಕ ಆಸಕ್ತಿ, ಇಚ್ಛಾಶಕ್ತಿ ಮತ್ತು ಗುರಿಗಳ ಆಧಾರದಲ್ಲಿ ಸಂಶೋಧನೆ ಹಾಗೂ ಸಾಹಿತ್ಯ ವಿಮರ್ಶೆ ನಡೆಯುತ್ತ ಬಂದಿದ್ದರೂ, ಅವುಗಳ ವ್ಯಾಪ್ತಿ ಸೀಮಿತವಾಗಿದೆ. ಇಂತಹ ಪ್ರಯತ್ನಗಳಿಗೆ ಸಾಂಸ್ಥಿಕ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತಾಗ ಅವುಗಳ ಪರಿಣಾಮಕಾರಿತ್ವ ಹೆಚ್ಚುತ್ತದೆ. ತಕ್ಷಣದ ಪ್ರಯೋಜನಕ್ಕೆ ಸೀಮಿತವಾಗದೆ, ಮುಂದಿನ ಹಲವು ವರ್ಷಗಳವರೆಗೆ ಮೌಲ್ಯಯುತ ಕೊಡುಗೆ ನೀಡುವ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು. ವಿಮರ್ಶಾ ಪ್ರಜ್ಞೆ ಹಾಗೂ ಸೃಜನಶೀಲ ಬರವಣಿಗೆಯ ಚುರುಕುತನ ಬೆಳೆಸುವಲ್ಲಿ ಇಂತಹ ಕಮ್ಮಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಸಾಹಿತ್ಯವನ್ನು ತುಂಡು ತುಂಡಾಗಿ ಅಧ್ಯಯನ ಮಾಡುವ ಪ್ರವೃತ್ತಿ ಅಪಾಯಕಾರಿಯಾಗಿದೆ. ಸಾಹಿತ್ಯ ವಿಮರ್ಶೆಯಲ್ಲಿ ಹಾಸುಹೊಕ್ಕಾಗಿರುವ ಪೂರ್ವಗ್ರಹಗಳನ್ನು ಗುರುತಿಸುವುದರ ಜತೆಗೆ, ಈಗಾಗಲೇ ಒಪ್ಪಿತವಾಗಿರುವ ವಿಚಾರಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಪಠ್ಯಗಳ ಹೊಸ ಓದು, ಮರುಮೌಲ್ಯಮಾಪನ ಮತ್ತು ಸಂಶೋಧನೆಯಿಂದ ಹೊರಹೊಮ್ಮುವ ಹೊಸ ಅರಿವುಗಳಿಗೆ ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಯಾವಾಗ ಸ್ಥಾನ ದೊರೆಯುತ್ತದೆ ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವಿಮರ್ಶಾ ಪ್ರಜ್ಞೆಯನ್ನು ಬೆಳೆಸುವುದು ಅತ್ಯಗತ್ಯ. ವಿಮರ್ಶೆ ಮನುಷ್ಯನನ್ನು ಪರಿಪಕ್ವಗೊಳಿಸುವುದರ ಜತೆಗೆ, ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತದೆ. ಸಾಹಿತ್ಯದ ಅಕ್ಷರಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದು ಸಾಹಿತ್ಯ ವಿದ್ಯಾರ್ಥಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕ ಪ್ರೊ. ಬಸವರಾಜ ಎಂ. ಕೋಡಗುಂಟಿ ಹಾಗೂ ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮಲಿಂಗಪ್ಪ ಟಿ. ಬೇಗೂರು ಮಾತನಾಡಿದರು. ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂರು ದಿನಗಳ ಕಮ್ಮಟದಲ್ಲಿ ಹತ್ತು ಗೋಷ್ಠಿಗಳು, ಚರ್ಚೆಗಳು ಮತ್ತು ಸಂವಾದ ಕಾರ್ಯಕ್ರಮಗಳು ನಡೆದವು. ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ವಿದ್ವಾಂಸರು ಹಾಗೂ ಚಿಂತಕರು ಭಾಗವಹಿಸಿ, ಕನ್ನಡ ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಕಮ್ಮಟದ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವಿಕ್ರಮ ವಿಸಾಜಿ, ಡಾ. ಅಪ್ಪಗೆರೆ ಸೋಮಶೇಖರ, ಡಾ. ರೋಹಿಣಾಕ್ಷ ಶಿರ್ಲಾಲು, ಡಾ. ವಿಜಯಕುಮಾರ್, ಡಾ. ರಾಜಶ್ರೀ ಸೇರಿದಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಸಂಶೋಧನಾ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ರಾಜ್ಯದ ವಿವಿಧ ಭಾಗಗಳ ಶಿಬಿರಾರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಭಾಗವಹಿಸಿದ್ದರು.






