ಕಲಬುರಗಿ | ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ : ಕಾರ್ಮಿಕ ಕಾಯ್ದೆ ಕುರಿತು ಅರಿವು

ಕಲಬುರಗಿ : ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಆಯುಕ್ತ ಎಂ.ಸುಬ್ರಮಣ್ಯಮ್ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯ ಇ.ಪಿ.ಎಫ್.ಓ ಕಚೇರಿಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಸಂವಾದ ನಡೆಸಿ ಕಾರ್ಮಿಕರಿಗೆ ವಿವಿಧ ಸವಲತ್ತು ಒದಗಿಸುವ ನಾಲ್ಕು ಕಾರ್ಮಿಕ ಸಂಹಿತೆ ಕುರಿತು ಅರಿವು ಮೂಡಿಸಲಾಯಿತು.
ವೇತನ ಸಂಹಿತೆ-2019, ಕೈಗಾರಿಕಾ ಸಂಬಂಧ ಸಂಹಿತೆ-2020, ಸಾಮಾಜಿಕ ಭದ್ರತೆ ಸಂಹಿತೆ-2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020 ಕುರಿತು ವಿವವರವಾಗಿ ಕಾರ್ಮಿಕ ಸಂಘಟನೆ ಮುಖಂಡರಿಗೆ ತಿಳುವಳಿಕೆ ನೀಡಿದ್ದಲ್ಲದೆ ಕರಪತ್ರ ಹಂಚಲಾಯಿತು. ಉದ್ಯೋಗಸ್ಥರು ಮತ್ತು ಉದ್ಯೋಗದಾತರ ಪಾತ್ರಗಳ ಬಗ್ಗೆಯೂ ತಿಳಿ ಹೇಳಿದಲ್ಲದೆ ಈ ಕುರಿತು ಕಾರ್ಮಿಕ ವರ್ಗಕ್ಕೆ ಕಾರ್ಮಿಕ ಸಂಹಿತೆಗಳಿಂದ ಸಿಗುವ ಪ್ರಯೋಜನಗಳ ಕುರಿತು ವಿವರಿಸಲಾಯಿತು. ಟ್ರೇಡ್ ಯೂನಿಯನ್ ಪ್ರತಿನಿಧಿಗಳ ಪ್ರಶ್ನೆಗಳಿಗೂ ಸಭೆಯಲ್ಲಿ ಸ್ಪಷ್ಟನೆ ನೀಡಲಾಯಿತು.
ಸಭೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಯ ಜಂಟಿ ನಿರ್ದೇಶಕ ಯುವರಾಜ್, ಉಪ ನಿರ್ದೇಶಕ ರಮೇಶ್ ರೈ, ಸಹಾಯಕ ಕಾರ್ಮಿಕ ಆಯುಕ್ತ(ಕೇಂದ್ರ) ಅಶ್ವಿನಿ ಕುಮಾರ್ ಯಾದವ್ ಹಾಗೂ ಸಹಾಯಕ ಪಿ.ಎಫ್ ಆಯುಕ್ತ ಭರತ್ ಲಾಲ್ ಮೀನಾ, ಸಿಐಟಿಯು, ಐಎನ್‌ಟಿಯುಸಿ ಹಾಗೂ ಎಐಯುಯುಸಿಯ ಮುಖಂಡರು ಭಾಗವಹಿಸಿದ್ದರು.





