Kalaburagi | ಬಂಜಾರಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ಬಂಜಾರಾ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘ ಹಾಗೂ ಗೋರಸಿಕವಾಡಿ, ಕಲಬುರಗಿ ಜಿಲ್ಲೆ ವತಿಯಿಂದ 2026–27ನೇ ಸಾಲಿನ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಐವಾನ-ಇ-ಶಾಹಿ ರಸ್ತೆಯ ಬಂಜಾರಾ ಭವನದಲ್ಲಿ ಶನಿವಾರ ಸಂಭ್ರಮದಿಂದ ಆಯೋಜಿಸಲಾಯಿತು.
10ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಬಂಜಾರಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಹುದ್ದೆಗಳಿಗೆ ಬಡ್ತಿ ಪಡೆದವರು, ನಿವೃತ್ತರಾದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಪರಮಪೂಜ್ಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಸೋನ್ಯಾಲಗಿರಿ ಬೇಡಸೂರ ಹಾಗೂ ಪರಮಪೂಜ್ಯ ಶ್ರೀ ಅಪ್ಪಾರಾವ ದೇವಿ ಮುತ್ಯಾ, ಕೊಲ್ಲಾಪುರ ಮಹಾಲಕ್ಷ್ಮಿ ಶಕ್ತಿ ಪೀಠ, ಶ್ರೀನಿವಾಸ ಸರಡಗಿ, ಕಲಬುರಗಿ ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಶ್ರೀ ಬಳಿರಾಮ ಮಹಾರಾಜರು ಮತ್ತು ಶ್ರೀ ಸೇವಾಲಾಲ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ಉದ್ಘಾಟಿಸಿದರು. ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಸಾಧನೆಯ ಹಂಬಲ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಪ್ರಮುಖ ಸಾಧನ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ಬಂಜಾರಾ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭಾವಂತರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಸಂಘ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘ, ಬೆಂಗಳೂರಿನ ಕಾರ್ಯಾಧ್ಯಕ್ಷ ವಿಠಲ ಜಾಧವ, ಕರ್ನಾಟಕ ಪ್ರದೇಶ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ. ನಾಯಕ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಪಿ. ಚವ್ಹಾಣ, ರಾಯಸೀನಾ ಫೌಂಡೇಶನ್ ಕರ್ನಾಟಕದ ಸಹ ಸಂಯೋಜಕ ಡಾ. ಗೋಪಿಚಂದ ಬಾಣೋತ, ಸದಾಶಿವ ಒಳ ಮೀಸಲಾತಿ ಸಮಿತಿ ಅಧ್ಯಕ್ಷ ಶಾಮರಾವ ಪವಾರ, ಸಮೃದ್ಧಿ ಡೆವಲಪರ್ಸ್ ಉದ್ಯಮಿ ಸುನೀಲ ರಾಠೋಡ ಹಾಗೂ ಅರಣ್ಯ ಇಲಾಖೆಯ ಎಸಿಎಫ್ ಸುನೀಲಕುಮಾರ ಜಿ. ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ಎಸ್. ರಾಠೋಡ ವಹಿಸಿದ್ದರು. ಗೌರವಾಧ್ಯಕ್ಷ ಡಾ. ಪ್ರೇಮಸಿಂಗ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಬಾಬು ಎಂ. ಜಾಧವ, ಉಪಾಧ್ಯಕ್ಷರಾದ ಶಿವರಾಮ ರಾಠೋಡ ಹಾಗೂ ಸತೀಶ ರಾಮಚಂದ್ರ ಚವ್ಹಾಣ, ಸಹ ಕಾರ್ಯದರ್ಶಿ ಪ್ರಭು ಜಾಧವ, ಸಂಘಟನಾ ಕಾರ್ಯದರ್ಶಿಗಳಾದ ರವಿ ನಾಯಕ್, ಭೀಕುಸಿಂಗ್ ರಾಠೋಡ, ರಾಜಶೇಖರ ಕೆ. ಪವಾರ, ರಾಕೇಶ ಎಸ್. ಚವ್ಹಾಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಸಂಘದ ಸದಸ್ಯರಾದ ಕಿರಣದೇವಿ ಸುನೀಲ ರಾಠೋಡ, ಅನೀಲಕುಮಾರ ಚವ್ಹಾಣ, ರಾಜೇಂದ್ರ ರಾಠೋಡ, ಗುರುನಾಥ ರಾಠೋಡ, ಖೇಮಸಿಂಗ್ ಪವಾರ, ದೇವಿದಾಸ ತೇಜು ಚವ್ಹಾಣ, ಸೋಮು ರಾಠೋಡ, ಸಂತೋಷ ಚವ್ಹಾಣ, ಜ್ಯೋತಿ ರಾಠೋಡ, ಸ್ವರೂಪಾರಾಣಿ ಕೆ. ನಾಯಕ್ ಹಾಗೂ ಗೋಪಾಲ ರಾಠೋಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಅಭಿನಂದಿಸಿದರು.






