Kalaburagi | ಸುಸ್ಥಿರ ಅಭಿವೃದ್ಧಿಗೆ ಸೂಕ್ಷ್ಮಜೀವ ವಿಜ್ಞಾನ-ತಂತ್ರಜ್ಞಾನ ಅಗತ್ಯ: ಗದ್ದೆ ರಾಮಮೋಹನ್

ಕಲಬುರಗಿ: ದೇಶದ ಸುಸ್ಥಿರ ಅಭಿವೃದ್ಧಿ ಹಾಗೂ ಮಾನವನ ಜೀವ ಸುರಕ್ಷತೆಯನ್ನು ಕಾಪಾಡುವಲ್ಲಿ ಸೂಕ್ಷ್ಮಜೀವ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಆಂಧ್ರಪ್ರದೇಶದ ಶಾಸಕ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಗದ್ದೆ ರಾಮಮೋಹನ್ ಅಭಿಪ್ರಾಯಪಟ್ಟರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ವಿಭಾಗದ ಪ್ಯಾಶ್ಚರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ವರ್ಷಾಚರಣೆ ಹಾಗೂ ‘ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ’ ವಿಷಯದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್‌ನಂತಹ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸೂಕ್ಷ್ಮಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಮಾನವ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯಕ್ಕಾಗಿ ಸೋಂಕುಗಳ ಅರಿವು, ರೋಗ ನಿಯಂತ್ರಣ, ಲಸಿಕೆ ಅಭಿವೃದ್ಧಿ, ಔಷಧ ಸಂಶೋಧನೆ ಹಾಗೂ ಚಿಕಿತ್ಸಾ ವ್ಯವಸ್ಥೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಹೊಸ ಸವಾಲುಗಳು ಎದುರಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಸೂಕ್ಷ್ಮಜೀವಶಾಸ್ತ್ರ ಮತ್ತು ನವೀನ ತಂತ್ರಜ್ಞಾನಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಸಂಶೋಧನೆಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನವು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆಯಾಗಿದೆ ಎಂದರು.
ವಿಭಾಗವು ಐದು ದಶಕಗಳ ಅವಧಿಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಸೂಕ್ಷ್ಮಜೀವಿಗಳ ಅಧ್ಯಯನದ ಮೂಲಕ ಮಾನವ ಆರೋಗ್ಯ, ಔಷಧೋಪಚಾರ, ವೈರಸ್ ನಿಯಂತ್ರಣ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ವಿವಿಧ ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನವ ಜೀವರಕ್ಷಣೆಯಲ್ಲಿ ಸೂಕ್ಷ್ಮಜೀವಶಾಸ್ತ್ರದ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಹಾಗೂ ಸಮ್ಮೇಳನದ ಸಂಯೋಜಕಿ ಪ್ರೊ. ಎಂ.ಬಿ. ಸುಲೋಚನಾ ಮಾತನಾಡಿ, ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಸಮ್ಮೇಳನವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ನಾವೀನ್ಯತೆ ಮತ್ತು ತಂತ್ರಜ್ಞಾನ ಜ್ಞಾನದ ವೃದ್ಧಿಗೆ ಪೂರಕವಾಗಲಿದೆ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪ್ರೊ. ಚಂದ್ರಕಾಂತ ಕೆಳಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಐವತ್ತು ವರ್ಷಗಳ ಪಯಣದಲ್ಲಿ ವಿಭಾಗವು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ದಾಖಲಿಸಿದೆ. ವಿಭಾಗದ ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಜ್ಞಾನಿಗಳು, ಸಂಶೋಧಕರು, ಬೋಧಕರು ಹಾಗೂ ಉದ್ಯಮಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಸಾವಳಗಿ, ಶ್ರೀಮತಿ ಅನುರಾಧ ಗದ್ದೆ, ಕುಲಸಚಿವ ರಮೇಶ್ ಲಂಡನಕರ್, ಸಿಂಡಿಕೇಟ್ ಸದಸ್ಯ ಪೀರಜಾದೆ ಫಹೀಮುದ್ದೀನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ. ಲಿಂಗಪ್ಪ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಡಾ. ಯಶವಂತ ಮೆಂಜಿ ಹಾಗೂ ಡಾ. ಮಹೇಶ್ ದಿವಟರ್ ಅತಿಥಿಗಳನ್ನು ಪರಿಚಯಿಸಿದರು. ನರ್ಮದಾ ತಳ್ಳೋಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.






