Kalaburagi | ಜೇವರ್ಗಿಯಲ್ಲಿ ಸಚಿವ ಅಜಯ್ ಸಿಂಗ್‌ಗೆ ಘೇರಾವ್: ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ

ಜೇವರ್ಗಿ: ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜೇವರ್ಗಿಗೆ ಆಗಮಿಸಿದ ಸಚಿವ ಡಾ.ಅಜಯ್ ಸಿಂಗ್ ಅವರಿಗೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರವಲಯದ ಪ್ರವಾಸಿ ಕೇಂದ್ರದಲ್ಲಿ ಸಚಿವರು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯ ಬಳಿಕ ತಮ್ಮ ಬೇಡಿಕೆಗಳಿಗೆ ಸಚಿವರು ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಚಿವರ ವಾಹನವನ್ನು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ಹಾಗೂ ರೈತರ ವಿವಿಧ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಈ ಹಿಂದೆ ನೀಡಿದ್ದ ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಆರೋಪಿಸಿ ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ವೇಳೆ ಕಪ್ಪು ಬಟ್ಟೆ ಪ್ರದರ್ಶಿಸಿದ ಕಾರ್ಯಕರ್ತರು ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹೇಶ್ ರಾಠೋಡ್, ಇಬ್ರಾಹಿಂ ಪಟೇಲ್ ಯಾಳವಾರ, ಮಹಾಂತಗೌಡ ನಂದಿಹಳ್ಳಿ, ರಾಜಾ ಪಟೇಲ್, ಅಜೀಶ್ ಪಟೇಲ್, ಸಿದ್ದರಾಮಕಟ್ಟಿ, ಸಿದ್ದು ಕೇರೂರು, ಪುಂಡಲೀಕ್ ಗಾಯಕ್ವಾಡ್, ಬಾಬು ಪಾಟೀಲ್, ಹಬೀಬ್ ಜಾಮದಾರ್, ಶರಿಹರಿ ಕರ್ಕೆಳಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.






