Kalaburagi | ಗುಲ್ಬರ್ಗಾ ವಿವಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಡಿಗಲ್ಲು

ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಧಾನಮಂತ್ರಿ ಉಚ್ಚತ್ತರ್ ಶಿಕ್ಷಾ ಅಭಿಯಾನ (PM-USHA) ಯೋಜನೆಯಡಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲ್ಪಡುವ ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಸಂಯೋಜಿತ ಉಪನ್ಯಾಸ ಮಂದಿರ ಕಟ್ಟಡಗಳಿಗೆ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಡಿಗಲ್ಲು ನೆರವೇರಿಸಿದರು.
ಈ ಕಟ್ಟಡವು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ಆಧುನಿಕ ಅಧ್ಯಯನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಜೀ+2 ವಿನ್ಯಾಸದ ಕಟ್ಟಡದಲ್ಲಿ ಸುಸಜ್ಜಿತ ಕೊಠಡಿಗಳು, ಪೀಠೋಪಕರಣಗಳು, ಉಪನ್ಯಾಸ ಭವನಗಳು ಹಾಗೂ ಸಹಾಯಕ ಸೌಲಭ್ಯಗಳನ್ನು ಒಳಗೊಂಡಿದ್ದು, ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ.
ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಗ್ರಂಥಾಲಯದಲ್ಲಿ K.A.S., I.A.S ಸ್ಪರ್ಧಾತ್ಮಕ ಪುಸ್ತಕಗಳ ಲಭ್ಯತೆ, ಕ್ಯಾಂಪಸ್ ಮೂಲಸೌಕರ್ಯ ಅಭಿವೃದ್ಧಿ, ಹಾಸ್ಟೆಲ್ ಸಮಸ್ಯೆ ಪರಿಹಾರ ಸೇರಿದಂತೆ ಅವರ ಮನವಿಗಳನ್ನು ಆಲಿಸಿದರು. ವಿದ್ಯಾರ್ಥಿಗಳಿಗೆ ಅರ್ಧ ದಿನವಿರುವ ಸಮಯದಲ್ಲಿ ಅವರು ಸಮಸ್ಯೆಗಳನ್ನು ಕಡೆಯವರೆಗೆ ಕೇಳಿ ಪರಿಹಾರ ಕಂಡು ಕೊಡಲು ಭರವಸೆ ನೀಡಿದರು.
ಪ್ರಿಯಾಂಕ್ ಖರ್ಗೆ ಅವರು ಹೇಳಿದರು, “ವಿದ್ಯಾರ್ಥಿಗಳಿಗೆ ಕೇವಲ ಪದವಿ ಪಡೆಯುವುದು ಮುಖ್ಯವಲ್ಲ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತಿ ಅವಶ್ಯಕ. ಈ ಕೌಶಲ್ಯಾಭಿವೃದ್ಧಿ ಕೇಂದ್ರವು ಕಲ್ಯಾಣ ಕರ್ನಾಟಕ ಭಾಗದ ಯುವಜನತೆಗೆ ಸಬಲೀಕರಣ ನೀಡಲಿದೆ.”
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ, ಗುಲ್ಬರ್ಗಾ ವಿ.ವಿ. ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು ಸೇರಿದಂತೆ ವಿ.ವಿ. ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.






