ಕಲಬುರಗಿ | ಕೋಲಿ-ಕಬ್ಬಲಿಗ ಜನಾಂಗವನ್ನು ಎಸ್.ಟಿ(ST) ಪಟ್ಟಿಗೆ ಸೇರ್ಪಡೆ ಕುರಿತಾಗಿ ಸಿಎಂರನ್ನು ಭೇಟಿ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರಕಿ ಜನಾಂಗಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿರುವ ಕಾರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪುನಃ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ಕೋಲಿ-ಕಬ್ಬಲಿಗ ಸಮಾಜದ ಮುಖಂಡರು ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಕಾಸಸೌಧದ ಸಚಿವರ ಕಚೇರಿಯಲ್ಲಿ ನಡೆದ ಕೋಲಿ-ಕಬ್ಬಲಿಗ ಜನಾಂಗದ ಮುಖಂಡರ ಹಾಗೂ ಜನ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ್ದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಣದೀಪ್ ಅವರಿಂದ ವಿವರಗಳನ್ನು ಪಡೆದ ಸಚಿವರು, ಕೋಲಿ ಹಾಗೂ ಇನ್ನಿತರ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಎದುರಾಗಿರುವ ತಾಂತ್ರಿಕ ತೊಡಕುಗಳನ್ನು ಅವಲೋಕನ ಮಾಡಿ ವರದಿ ತಯಾರಿಸಲು ಸೂಚಿಸಿದರು.
ಸೂಕ್ತ ಮಾಹಿತಿಯನ್ನು ಕ್ರೋಢೀಕರಿಸಿದ ನಂತರ ಕೋಲಿ-ಕಬ್ಬಲಿಗ ಜನಾಂಗದ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕೋರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಭೆಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್ ಹಾಗೂ ಕೋಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.







