ಕಲಬುರಗಿ | ಸಚಿವ ರಹೀಂ ಖಾನ್ ಅವರಿಂದ ಇಂದಿರಾ ಕ್ಯಾಂಟೀನ್ ವೀಕ್ಷಣೆ

ಕಲಬುರಗಿ : ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಬುಧವಾರ ನಗರದ ವಾರ್ಡ್ ನಂ.46 ವ್ಯಾಪ್ತಿಗೆ ಬರುವ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಸಾರ್ವಜನಿಕರ ಬೇಡಿಕೆಯಂತೆ ಪ್ರತಿ ದಿನ 1,000 ಪ್ರಮಾಣದಲ್ಲಿ ಉಪಹಾರ, ಊಟ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಾದ್ಯಂತ 350 ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಈ ವರ್ಷ 184 ಹೊಸದಾಗಿ ತೆರೆಯಲು ನಿರ್ಧರಿಸಿದೆ. ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಮೊತ್ತದಲ್ಲಿ ಉಪಹಾರ, ಊಟ ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದರು.
ಕ್ಯಾಂಟೀನ್ ಭೇಟಿ ವೇಳೆಯಲ್ಲಿ ಮಾಸ್ಟರ್ ಕಿಚನ್ ರೂಂ ಸಹ ವೀಕ್ಷಿಸಿದ ಸಚಿವ ರಹೀಂ ಖಾನ್ ಅವರು, ಚಪಾತಿ, ಮೊಸರನ್ನ ಸವಿದು ಉಪಹಾರದ ಗುಣಮಟ್ಟ ಪರಿಶೀಲಿಸಿದರು. ಕ್ಯಾಂಟೀನ್ ನಲ್ಲಿ ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ನೀಡಲಾಗುವ ಉಪಹಾರ/ ಊಟದ ಬಗ್ಗೆ ಮೆನು ಅಳವಡಿಸಬೇಕು ಮತ್ತು ಬಡವರಿಗೆ ಗುಣಟ್ಟದ ಆಹಾರ ಪೂರೈಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಆಯುಕ್ತ ಆರ್.ಪಿ.ಜಾಧವ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲ, ಪರಿಸರ ಅಭಿಯಂತ ಅಭಯಕುಮಾರ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.







