ಕಲಬುರಗಿ | ಆಳಂದ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ರಾಮಲಿಂಗಾರೆಡ್ಡಿ

ಕಲಬುರಗಿ: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸ್ತುತ 2,736 ಅಧಿಕಾರಿ-ನೌಕರರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶನಿವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಆಳಂದ ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸಂಸ್ಥೆಗೆ ಚಾಲಕರು, ನಿರ್ವಾಹಕರೆ ಆಧಾರ ಸ್ಥಂಭ. ಅವರಿಲ್ಲದೆ ಬಸ್ ಕಾರ್ಯಚರಣೆ ಅಸಾಧ್ಯ. 2016 ರಿಂದ 2023ರವರೆಗೆ ನೇಮಕಾತಿ ಮಾಡದ ಕಾರಣ ಮಾನವ ಸಂಪನ್ಮೂಲ ಸಮಸ್ಯೆಯಾಗಿತ್ತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸ್ಥೆಯಲ್ಲಿ 1,000 ಅನುಕಂಪ ಸೇರಿ ಇದುವರೆಗೆ 10 ಸಾವಿರ ನೌಕರರ ನೇಮಕಾತಿ ಮಾಡಿದ್ದೇವೆ ಎಂದರು.
ರಾಜ್ಯದ 4 ಸಾರಿಗೆ ಸಂಸ್ಥೆಗಳ ಪೈಕಿ ಉತ್ತಮ ಹಣಕಾಸಿನ ಪರಿಸ್ಥಿತಿ ಹೊಂದಿರುವುದು ಇಲ್ಲಿನ ಕೆ.ಕೆ.ಅರ್.ಟಿ.ಸಿ. ಮಾತ್ರ. ಅಳಂದ ಬಸ್ ನಿಲ್ದಾಣ ನಿರ್ಮಾಣಕ್ಕೆ 5 ಕೋಟಿ ರೂ. ಸಾಕಾಗುವುದಿಲ್ಲ. ಒಮ್ಮೆ ಕೆಲಸ ಆರಂಭವಾದ ನಂತರ ಹೆಚ್ಚಿನ ಅನುದಾನ ಸಹ ನೀಡಲಾಗುವುದು. ಕಳೆದ ಎರಡು ವರ್ಷದ ಅವಧಿಯಲ್ಲಿ ಈ ಸಂಸ್ಥೆಗೆ 1,031 ಬಸ್ ಒದಗಿಸಿದ್ದೇವೆ. ಪ್ರಸಕ್ತ ವರ್ಷ ಕೆ.ಎಸ್.ಆರ್.ಟಿ.ಸಿ.ಗೆ 900, ವಾಯುವ್ಯ ಸಾರಿಗೆಗೆ 700, ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಬಸ್ ನೀಡಿದ್ದೇವೆ. ಜನಸಂಖ್ಯೆ ಹೆಚ್ಚಳ, ಪ್ರಯಾಣಿಕರ ಓಡಾಟ ಹೆಚ್ಚಿದ್ದರಿಂದ ಇಲ್ಲಿನ ಸಂಸ್ಥೆಗೆ ಹೆಚ್ಚಿನ ಬಸ್ ಖರೀದಿಸಲು ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಅರ್ಥಿಕ ನೆರವು ಕೋರಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ನೌಕರರ ಭದ್ರತೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಕೆಲಸದಲ್ಲಿ ಇರುವಾಗ ಅಥವಾ ಇರದೆ ಇದ್ದಾಗ ಸಹ ನೌಕರರು ಮೃತರಾದಲ್ಲಿ ಕೆ.ಎಸ್.ಆರ್.ಟಿ.ಸಿ.ಯಲ್ಲಿ 1.50 ಕೋಟಿ ಮತ್ತು ಉಳಿದ ಸಂಸ್ಥೆಗಳಲ್ಲಿ 1 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಗ್ರ್ಯಾಜುಟಿ ಮೊತ್ತ 10 ಲಕ್ಷಕ್ಕೆ ಏರಿಸಲಾಗಿದೆ. ಬಸ್ ಅಪಘಾತದಲ್ಲಿ ಪ್ರಯಾಣಿಕರು ಮೃತರಾದಲ್ಲಿ ಅವರ ಅವಲಂಭಿತರಿಗೆ ಅಪಘಾತ ವಿಮೆ ಪರಿಹಾರ ಯೋಜನೆಯಡಿ 10 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ, ಆಳಂದ ತಾಲೂಕು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿಂದ ನೆರೆ ರಾಜ್ಯಕ್ಕೆ ಪ್ರಯಾಣಿಕರ ಓಡಾಟ ಹೆಚ್ಚಿದೆ. ಹೀಗಾಗಿ ಆಳಂದ ಘಟಕಕ್ಕೆ ಹೆಚ್ಚುವರಿಯಾಗಿ 20 ಬಸ್ ನೀಡಬೇಕು ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಗಡಿ ಭಾಗದವರೆಗೂ ಎಲ್ಲಾ ಬಸ್ ನಲ್ಲಿಯೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿಕೊಂಡರು.
ಆಳಂದ ಬಸ್ ನಿಲ್ದಾಣ 40 ವರ್ಷ ಹಳೆಯದಾಗಿದ್ದು, ತೆಗ್ಗು ಪ್ರದೇಶದಲ್ಲಿ ಇರುವ ಕಾರಣ ಮಳೆ ನೀರು ನಿಂತು ಕೆಟ್ಟು ಹೋಗಿದೆ. ಇದೀಗ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದೆ 10 ತಿಂಗಳಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಂದಲೆ ಇದನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು. ಇನ್ನು ತಾಲೂಕಿನ ಮಾದನಹಿಪ್ಪರಗಾ, ನಿಂಬಾಳ, ಹಿರೊಳ್ಳಿ, ಖಜೂರಿ, ಕಡಗಂಚಿಯಲ್ಲಿಯೂ ಬಸ್ ನಿಲ್ದಾಣ ಹೊಸದಾಗಿ ನಿರ್ಮಿಸಬೇಕು ಎಂದ ಅವರು, ರಾಜ್ಯದ ಸಾರಿಗೆ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಗಡಿ ಭಾಗ ಇದಾಗಿರುವುದರಿಂದ ಮಹಾರಾಷ್ಟ್ರಕ್ಕೆ ಹೋಗಲು ರಾಜ್ಯದ ಬಸ್ ಗಳನ್ನೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಹೀಗಾಗಿ ಬಸ್ ಸೌಕರ್ಯ ಹೆಚ್ಚಿಸುವ ಅವಶ್ಯಕತೆ ಇದೆ ಎಂದರು.
ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಆಳಂದ ಬಸ್ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಇದೀಗ 5 ಕೋಟಿ ರೂ. ಅನುದಾನ ನೀಡಲಿದೆ. ಇನ್ನು ಅನುದಾನ ಹೆಚ್ಚು ಬೇಕಾದರೆ ಕೆ.ಕೆ.ಆರ್.ಡಿ.ಬಿ. ಅನುದಾನ ನೀಡಲಾಗುವುದು. ಕಾಮಗಾರಿ ಗುಣಮಟ್ಟದಾಗಿರಬೇಕೆಂದು ಎಂ.ಡಿ. ಅವರಿಗೆ ನಿರ್ದೇಶನ ನೀಡಿದ ಅವರು ಅನುಭವಿ ಶಾಸಕರಾಗಿರುವ ಬಿ.ಆರ್.ಪಾಟೀಲ ಅವರಿಗೆ ಮಂತ್ರಿ ಸ್ಥಾನ ಶೀಘ್ರ ದೊರೆಯಲಿ ಎಂದ ಶುಭ ಹಾರೈಸಿದರು.
ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಮತ್ತು ಆಳಂದ ಘಟಕದ ಸಂಕ್ಷಿಪ್ತ ಮಾಹಿತಿ ನೀಡಿದರು, 1.22 ಎಕರೆ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ತಾಲೂಕಿನ ಸಾರಿಗೆ ಸಂಪರ್ಕ ಉತ್ತಮಗೊಳ್ಳಲಿದೆ ಎಂದರು.
36 ಜನರಿಗೆ ನೇಮಕಾತಿ ಆದೇಶ ಪತ್ರ ವಿತರಣೆ:
ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಬಳ್ಳಾರಿ, ರಾಯಚೂರು, ಬೀದರ ಜಿಲ್ಲೆಯಲ್ಲಿ ನಿಧನ ಹೊಂದಿದ 36 ನೌಕರರ ಅವಲಂಭಿತರಿಗೆ ಅನುಕಂಪದ ಅಧಾರದ ಮೇಲೆ ನೇಮಕಾತಿ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬಸ್ ನಲ್ಲಿ ಪ್ರಯಾಣ ಮಾಡುವಾಗ ದುರ್ಘಟನೆಯಲ್ಲಿ ಮೃತರಾದ ಇಬ್ಬರು ಪ್ರಯಾಣಿಕರ ಅವಲಂಭಿತರಿಗೆ ತಲಾ 10 ಲಕ್ಷ ರೂ. ಗಳಂತೆ ಅಪಘಾತ ಪರಿಹಾರ ನಿಧಿಯಡಿ ಪರಿಹಾರದ ಚೆಕ್ ಸಚಿವರು, ಶಾಸಕರು ವಿತರಿಸಿದರು.







