ಕಲಬುರಗಿ | ಆಳಂದ ಪಟ್ಟಣದಲ್ಲಿ ಬಸವಣ್ಣನವರ ಬ್ಯಾನರ್ ಹರಿದ ಕಿಡಿಗೇಡಿಗಳು ; ಸ್ಥಳೀಯರಿಂದ ಪ್ರತಿಭಟನೆ

ಕಲಬುರಗಿ : ಆಳಂದ ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವ ಬಸವೇಶ್ವರರ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯನ್ನು ಖಂಡಿಸಿ, ಬಿಜೆಪಿ ಮುಖಂಡರು ಮತ್ತು ಸ್ಥಳೀಯ ಬಸವಾಭಿಮಾನಿಗಳು ಬಸ್ ನಿಲ್ದಾಣದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಕಿಡಿಗೇಡಿಗಳ ಈ ವರ್ತನೆಯನ್ನು ಖಂಡಿಸಿ, ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ವ್ಯಕ್ತಿಗಳ ಅಪಮಾನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಸುಭಾಷ ಗುತ್ತೇದಾರ್, ಬಸವಣ್ಣನವರ ಭಾವಚಿತ್ರ ಹರಿದು ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಅಧಿಕಾರಿಗಳಿಗೆ ಒತ್ತಡ ಹೇರಿದರು.
ಶರಣಗೌಡ ಪಾಟೀಲ್ ದೇವಂತಗಿ ಮಾತನಾಡಿ, ಯಾವ ನಾಡಿನಲ್ಲಿ ಬಸವಣ್ಣನವರು ಸಮಾನತೆ ಸಾರಿದ್ದಾರೆ, ಅದೇ ನಾಡಿನಲ್ಲಿ ಅವರಿಗೆ ಅಪಮಾನ ವಾಗುತ್ತಿರುವುದು ಖಂಡನೀಯ, ಇದಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪಟ್ಟಣದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಿಡಿಗೇಡಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶರಣು ಕುಲಕರ್ಣಿ ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು, ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು.







